ನಮ್ಮ ಭಾರತದ ಅಖಂಡತೆ, ಸಾರ್ವಭೌಮತೆಯ ಪ್ರಶ್ನೆ ಬಂದಾಗೆಲ್ಲ ನಮ್ಮ ಕಾಂಗ್ರೆಸ್ ಪಕ್ಷ ಎಂದಿಗೂ ದೇಶವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ. ಉಗ್ರ ಕೃತ್ಯಗಳಿಂದ ಭಾರತದ ತಾಳ್ಮೆ ಪರೀಕ್ಷಿಸುತ್ತಿರುವ ಪಾಪಿ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಸಹ ನಾವು ಅವರ ಜೊತೆ ನಿಲ್ಲಲಿದ್ದೇವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಂವಿಧಾನ ಉಳಿಸಿ ಅಭಿಯಾನದಲ್ಲಿ ಮಾತನಾಡಿದ ಅವರು, ಅಂದು ಸೋನಿಯಾ ಗಾಂಧಿ ಸರ್ಕಾರ, ಮನಮೋಹನ್ ಸಿಂಗ್ ಸರ್ಕಾರ 90 ಸಾವಿರ ಕೋಟಿ ಸಬ್ಸಿಡಿ ಕೊಟ್ಟಿದೆ. ಇಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 63 ಡಾಲರ್‌ನಲ್ಲಿ ಖರೀದಿ ಮಾಡುತ್ತಿದೆ. ಸಬ್ಸಿಡಿ ಕೊಟ್ಟರೆ ಅಂಬಾನಿ ಬಂಕ್‌ಗಳು ಸ್ಥಗಿತಗೊಳ್ಳುತ್ತವೆ ಎಂಬ ಕಾರಣಕ್ಕೆ ಮೋದಿ ಸರ್ಕಾರ ಸಬ್ಸಿಡಿ ಕೊಡುತ್ತಿಲ್ಲ. ದೇಶದಲ್ಲಿ ಎಲ್ಲಾ ರೀತಿಯಿಂದಾದ ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಮೂಲ ಕಾರಣವಾಗಿದೆ.
ಕೇಂದ್ರದಲ್ಲಿ ರಾಹುಲ್ ಗಾಂಧಿಯಾದಿಯಾಗಿ 140 ಕೋಟಿ ದೇಶದ ಜನತೆ ನಿಮ್ಮ ಜೊತೆಗಿದ್ದೇವೆ. ಈ ಕೂಡಲೇ ನಮ್ಮ ದೇಶದ ಮೇಲೆ ದಾಳಿ ನಡೆಸಿದ ಪಾಕಿಸ್ಥಾನದ ಭಯೋತ್ಪಾದಕರ ಮೇಲೆ ದಂಡೆತ್ತಿ ದಾಳಿ ನಡೆಸಿರಿ. ಸೈದ್ಧಾಂತಿಕ ವಿಚಾರ, ವ್ಯತ್ಯಾಸಗಳು ಎಷ್ಟೇ ಇರಲಿ, ದೇಶದ ವಿಷಯದಲ್ಲಿ ಯಾವ ರಾಜಿಯೂ ಇಲ್ಲ. ದೇಶಕ್ಕೆ ವೈರಿಯಾದರೆ ನಮಗೂ ವೈರಿಯೇ. ಪ್ರಧಾನಿ ಮೋದಿಯವರೇ ಹೆದರಬೇಡಿ. ದೇಶದ ವೀರ ಯೋಧರಿಗೆ ನೈತಿಕ ಸ್ಥೈರ್ಯವಾಗಿ ನಾವೆಲ್ಲ ಇರಲಿದ್ದೇವೆ ಎಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ದೇಶದ ಜನೆತೆಗೆ ಬೇಕಿರುವುದು ರಕ್ಷಣೆ; ನಿಮ್ಮ ಭಾಷಣವಲ್ಲ: ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಕಿಡಿ
ಅಭಿಯಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಕೈಜೋಡಿಸಿದ ಧಾರವಾಡ ಜಿಲ್ಲೆಯ ಜನೆತೆಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು, ಮುಖಂಡರು ವೇದಿಕೆ ಮೇಲಿದ್ದರು.