ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಒಟ್ಟು ವಿಸ್ತೀರ್ಣ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಕರ್ನಾಟಕದ ಎರಡನೆ ಅತಿದೊಡ್ಡ ನಗರವೆಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಧಾರವಾಡ ಶೈಕ್ಷಣಿಕ ನಗರವಾದರೆ, ಹೂವು ಬಳ್ಳಿಗಳ ಕ್ರೋಢೀಕರಣವಾದ ಹುಬ್ಬಳ್ಳಿ ವಾಣಿಜ್ಯ ನಗರ ಎನಿಸಿಕೊಂಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಯೋಜನೆಯು ನಗರಗಳನ್ನು ಪರಿವರ್ತಿಸುತ್ತದೆ ಮತ್ತು ಹಸಿರು ಭವಿಷ್ಯವನ್ನು ಉತ್ತೇಜಿಸುತ್ತದೆ ಎಂಬ ಆಶಾಭಾವದಿಂದ ಇದ್ದ ಜನರಲ್ಲಿ ಕೆಲವು ನಿರಾಸೆ, ಬೇಸರಗಳೂ ಕೂಡ ಮೂಡಿರುವುದು ಮಾತ್ರ ವಾಸ್ತವ.
ಈ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಸುಮಾರು 18.50 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದ ಸಮೀಪವಿರುವ ಜನತಾ ಬಜಾರ್ ಮಾರುಕಟ್ಟೆಯಲ್ಲಿ ಬೃಹತ್ತಾದ ತರಕಾರಿ ವ್ಯಾಪಾರಸ್ಥರಿಗೆ ಅನುಕೂಲವಾಗಲಿ, ವ್ಯಾಪಾರಸ್ಥರು ಬಿಸಿಲು ಮಳೆಗೆ ಬೆಚ್ಚಗಾಗಿ ಕುಳಿತುಕೊಳ್ಳಲಿ ಹಾಗೂ ಹೆಚ್ಚಿನ ಸಂಖ್ಯೆಯ ದಿನಬಳಕೆ ವಸ್ತುಗಳ ಅಥವಾ ತರಕಾರಿ ಮಾರಾಟಗಾರರಿಗೆ ಅನುಕೂಲವಾಗಲಿ ಎಂಬ ದೃಷ್ಟಿಕೋನದಿಂದ ಜನತಾ ಬಜಾರ್ ಕಟ್ಟಡವನ್ನು ನಿರ್ಮಿಸಿ ಉದ್ಘಾಟನೆಯನ್ನೂ ಮಾಡಲಾಗಿದೆ. ಆದರೆ; ಇಂದಿಗೂ ವ್ಯಾಪಾರಸ್ಥರಿಗೆ ಈ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶವಿಲ್ಲದೆ ಈ ಕಟ್ಟಡ ಈಗ ನಾಯಿ, ಜಾನುವಾರುಗಳ ವಾಸಸ್ಥಾನವಾಗಿ, ಸಾರಾಯಿ ಪ್ರಿಯರಿಗೆ ಆಶ್ರಯತಾಣವಾಗಿ ಮಾರ್ಪಾಡಾಗಿದೆ.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿಯಲ್ಲಿ ಜನತಾ ಬಜಾರ್ ಮಾರುಕಟ್ಟೆ ನವೀಕರಣ ಯೋಜನೆಯು 2023ರ ಫೆಬ್ರುವರಿ 19ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತಿಯಲ್ಲಿ ಹಾಗೂ ಹಲವು ಗಣ್ಯ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯಿಂದ ಉದ್ಘಾಟನೆಗೊಂಡಿತ್ತು.
ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆಗಳನ್ನು ಈ ಕಟ್ಟಡದಲ್ಲಿ ಮಾಡಲಾಗಿದೆ. ನೆಲ ಮಹಡಿ 50 ಕಟ್ಟಾಗಳು ಮತ್ತು 31 ಮಳಿಗೆಗಳನ್ನು, ಮೊದಲ ಮಹಡಿ 75 ಕಟ್ಟಾಗಳು ಮತ್ತು 25 ಮಳಿಗೆಗಳನ್ನು, ಎರಡನೆ ಮಹಡಿ 20 ಕಚೇರಿಗಳೊಂದಿಗೆ, ಪ್ರತ್ಯೇಕ ವಿದ್ಯುಚ್ಛಕ್ತಿ ಕೊಠಡಿ, ಎಲ್ಲ ಮಹಡಿಗಳಲ್ಲೂ ಶೌಚಾಲಯ ಅನುಕೂಲತೆ, ಲಿಫ್ಟ್, ಕಣ್ಗಾವಲು ಹೀಗೆ ಎಲ್ಲ ರೀತಿಯ ಅನುಕೂಲತೆಯ ವ್ಯವಸ್ಥೆಯಿರುವ ಈ ಮಾರುಕಟ್ಟೆಯಲ್ಲಿ ಉದ್ಘಾಟನೆಗೊಂಡು 1 ವರ್ಷ 5 ತಿಂಗಳು ಕಳೆದರೂ ವ್ಯಾಪಾರ, ವಹಿವಾಟುಗಳಂತ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ. ವ್ಯಾಪಾರಸ್ಥರು ತರಕಾರಿ ಮಾರಾಟಕ್ಕೆ ಹೆಣಗಾಡುವಂತಾಗಿದೆ. ಗಲೀಜಿನಲ್ಲೇ ಕುಳಿತು ವ್ಯಾಪಾರ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಈ ದಿನ.ಕಾಮ್ ಜೊತೆಗೆ ತರಕಾರಿ ಮಾರಾಟಗಾರರು ಮಾತನಾಡಿ, “ಈ ರೀತಿಯ ಸ್ಮಾರ್ಟ್ ಸಿಟಿ ಕಟ್ಟಡ ನಿರ್ಮಾಣವಾಗಿರುವುದೇನೊ ನಮಗೆ ಖುಷಿ ತಂದಿದೆ. ಆದರೆ ಉದ್ಘಾಟನೆಗೊಂಡು ವರ್ಷ ಕಳೆದರೂ ನಮಗಿನ್ನೂ ಒಳಗೆ ಹೋಗಲೂ ಅವಕಾಶವಿಲ್ಲ. ನಮ್ಮನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿ, ಬೀದಿಗೆ ತಂದು ಕೂರಿಸಿ, ದೊಡ್ಡ ಬಿಲ್ಡಿಂಗ್ ಕಟ್ಟಿಸಿದ ರಾಜಕಾರಣಿಗಳು ಕೇವಲ ಹೆಸರು ಮಾಡಿಕೊಳ್ಳುವ ಕೆಲಸ ಮಾಡಿದ್ದಾರಷ್ಟೇ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಿಸಿಲಿಗೆ ನಮಗೆ ಈ ಮಾರುಕಟ್ಟೆ ಕಟ್ಟಡ ಅನುಕೂಲ ಮತ್ತು ಆಸರೆಯಾಗುತ್ತದೆ ಎಂದು ಖಷಿಪಟ್ಟಿದ್ದೆವು. ಲೋಕಾರ್ಪಣೆ ಮಾಡಿದ ನಂತರ ಯಾವುದೇ ಅಧಿಕಾರಿಗಳೂ, ರಾಜಕಾರಣಿಗಳೂ, ಸಂಸದರೂ ಮತ್ತೆ ತಿರುಗಿ ಕಾಲಿಟ್ಟಿಲ್ಲ ಎಂದು ತಮ್ಮ ಅಳಲನ್ನು ಹಂಚಿಕೊಂಡರು.
ಈ ದಿನ.ಕಾಮ್ ಜೊತೆಗೆ ಚಿಕ್ಕವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ವಾಲ್ಮೀಕಿ ಮಾತನಾಡಿ, “ನಾವಿಲ್ಲಿ 77 ಖಾಯಂ ವ್ಯಾಪಾರಸ್ಥರಿದ್ದೇವೆ. ಈ ಮಾರುಕಟ್ಟೆ ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆದರೂ, ಇಂದಿಗೂ ನಾವು ಬೀದಿಯಲ್ಲೆ ಬಿದ್ದವರಂತೆ ಇದ್ದೇವೆ. ಈ ಬಗ್ಗೆ ಹಲವು ಬಾರಿ ಶಾಸಕ, ಕಾರ್ಮಿಕ ಹಾಗೂ ಜಿಲ್ಲಾ ಸಚಿವ ಸಂತೋಷ ಲಾಡ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಮಿಷನರ್, ಮಹಾಪೌರರ ಎಲ್ಲರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಾರುಕಟ್ಟೆ ಕಟ್ಟಡದಲ್ಲಿ ಸಾಯಂಕಾಲವಾದರೆ ಕೆಲವು ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಯಾರೂ ಈ ಕಡೆಗೆ ತಲೆಕೆಡಿಸಿಕೊಂಡಿಲ್ಲ. ಈ ಕಟ್ಟಡ ಶುರುಮಾಡಿದರೆ ಜನರಿಗೂ ಅನುಕೂಲ ಮತ್ತು ಮಹಾನಗರ ಪಾಲಿಕೆಯೂ ಅದಾಯವನ್ನು ಗಳಿಸಬಹುದು” ಎಂದರು.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾಪೌರರಾದ (ಮೇಯರ್) ವೀರಣ್ಣ ಬಡಿಗೇರ ಮಾತನಾಡಿ, “ಮಾರುಕಟ್ಟೆ ಕಟ್ಟಡದ ಬಗ್ಗೆ ಹಲವು ಬಾರಿ ಮನವಿಗಳು ಬಂದಿದ್ದು ಗಮನಕ್ಕೆ ಬಂದಿದೆ. ಮುಂಬರುವ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದರು.
ಇನ್ನು 17 ಕಟ್ಟಾಗಳಷ್ಟೇ ಅಲ್ಲದೆ ಇನ್ನುಳಿದ ಬೀದಿ ಬದಿಯ ವ್ಯಾಪಾರಸ್ಥರೂ ಸ್ಥಳಾವಕಾಶಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಟ್ಟಾಗಳಿಗೆ ಕೊಟ್ಟು ಉಳಿದ ಮಳಿಗೆ ಅಥವಾ ಕಟ್ಟಾಗಳಿಗೆ ಬೀದಿ ಬದಿ ಮಾರಾಟಗಾರರಿಗೂ ವ್ಯವಸ್ಥೆ ಮಾಡಲಾಗುವುದು ಎಂದರು.
ಇನ್ನಾದರೂ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವರೋ? ಆ ಮೂಲಕ ಬೀದಿ ಪಾಲಾಗಿರುವ ವ್ಯಾಪಾರಸ್ಥರ ಬೇಡಿಕೆ ಈಡೇರುವುದೋ ಎಂದು ಕಾದುನೋಡಬೇಕಿದೆ.
