ನಮ್ಮ ದೇಶಕ್ಕೆ, ನಮ್ಮ ಜನತೆಗೆ ಬೇಕಿರುವುದು ರಕ್ಷಣೆ; ಜನರು ನಿಮ್ಮ ಕೈಯಲಿ ಅಧಿಕಾರ ಕೊಟ್ಟಿದ್ದಾರೆ. ಜನರ ಜೀವ ಉಳಿಸಲು ನೀವು ಮುಂದಾಗಬೇಕು. ದೇಶದ ರಕ್ಷಣೆಯ ವಿಚಾರ ಬಂದಾಗ; ಧರ್ಮ, ಪಕ್ಷಭೇದ ಬಿಟ್ಟು ದೇಶ ಮೊದಲು ಎಂಬ ಅರಿವಿಗೆ ಬರಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ಹುಬ್ಬಳ್ಳಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ಹುಬ್ಬಳ್ಳಿಯಲ್ಲಿ ‘ಸಂವಿಧಾನ್ ಬಚಾವೋ’ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಸಂವಿಧಾನ ನೀಡಿದ ಸ್ವತಂತ್ರವಾಗಿ ಮಾತನಾಡುವ, ಬರೆಯುವ ಶಕ್ತಿಯನ್ನು ಪ್ರಧಾನಿ ಮೋದಿಯವರು ಮೊಟಕುಗೊಳಿಸುತ್ತಿದ್ದಾರೆ. ಅವರ ವಿರುದ್ಧ ಯಾರಾದರೂ ಮಾತನಾಡಿದರೆ ಇಡಿ, ಇನ್‌ಕಮ್ ಟ್ಯಾಕ್ಸ್‌ನಂತಹ ದಮ್ಕಿ ಹಾಕುವ ರೂಢಿ ಬಂದಿದ್ದಾರೆ. ಇದರ ವಿರುದ್ಧ ಧ್ವನಿಯೆತ್ತದಿದ್ದರೆ; ನಿಮ್ಮ ಹಕ್ಕನ್ನು ನೀವೇ ಮೊಟಕುಗೊಳಿಸಿಕೊಂಡಂತೆ ಎಂದು ಜನರಿಗೆ ಕರೆಕೊಟ್ಟರು. ದೇಶ ಉಳಿಯಲಿ, ಒಗ್ಗಟ್ಟಿನಿಂದ ಇರಬೇಕು ಎಂಬ ಉದ್ದೇಶದಿಂದ ನಮ್ಮ ಪ್ರಯತ್ನಗಳು ನಡೆಯುತ್ತಿವೆ. ಹಿಂದುಳಿದವರ ಮತ್ತು ತುಳಿತಕ್ಕೊಳಗಾದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಜಾತಿ ಜನಗಣತಿ ಅವಶ್ಯವಾಗಿದೆ ಎಂದು ಹೇಳಿದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಪ್ರತಿಭಟನೆಗೆ ಮತ್ತು ಒತ್ತಡಕ್ಕೆಮಣಿದ ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಒಪ್ಪಿಕೊಂಡಿದೆ.
ಇನ್ನು ಪಹಲ್ಗಾಮ್‌ನಲ್ಲಿ ಉಗ್ರರ ಪ್ರವೇಶ, ಭದ್ರ ಲೋಪ ಹೇಗಾಯಿತು? ಈ ಕುರಿತು ಮುಕ್ತವಾಗಿ ಚರ್ಚಿಸಲು ಎಲ್ಲ ಪಕ್ಷದವರೊಂದಿಗೆ ದೆಹಲಿಗೆ ಹೋದೆವು. ಆದರೆ ಪ್ರಧಾನಿ ಮೋದಿಯವರು ಬಿಹಾರದಲ್ಲಿ ಚುನಾವಣಾ ಭಾಷಣದಲ್ಲಿ ನಿರತರಾಗಿದ್ದರು. ನಿಮ್ಮ ಭಾಷಣ ತೆಗೆದುಕೊಂಡು ನಾವೇನು ಮಾಡೋಣ? ನಮ್ಮ ದೇಶಕ್ಕೆ, ನಮ್ಮ ಜನಕ್ಕೆ ಬೇಕಿರುವುದು; ರಕ್ಷಣೆ. ಜನರು ನಿಮ್ಮ ಕೈಯಲಿ ಅಧಿಕಾರ ಕೊಟ್ಟಿದ್ದಾರೆ. ಜನರ ಜೀವ ಉಳಿಸಲು ಮುಂದಾಗಿ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ದೇಶದ ರಕ್ಷಣೆಯ ವಿಚಾರ ಬಂದಾಗ; ಧರ್ಮ, ಪಕ್ಷಭೇದ ಬಿಟ್ಟು ಮೊದಲು ದೇಶ ಮುಖ್ಯವಾಗಿದೆ ಎಂಬ ಅರಿವು ಮೂಡಿಸಿಕೊಳ್ಳಬೇಕು. ಮೋದಿ ಸರ್ಕಾರದಲ್ಲಿ ಗ್ಯಾಸ್ ಸಿಲೆಂಡರ್, ಪೆಟ್ರೋಲ್, ಡಿಸೇಲ್ ಹೀಗೆ ಎಲ್ಲ ಬೆಲೆ ಗಗನಕ್ಕೇರಿವೆ. 34 ಲಕ್ಷ ಕೋಟಿ ಹಣವನ್ನು ಬಡವರಿಂದ ಸುಲಿಗೆ ಮಾಡಿದ್ದಾರೆ ಎಂದರು.