ತನ್ನ ಪ್ರೀತಿಗೆ ಯುವತಿಯು ಸಮ್ಮತಿ ನೀಡದ ಕಾರಣ ಧಾರವಾಡ ಜಿಲ್ಲೆಯ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ 25ವರ್ಷದ ಪ್ರವೀಣ ಬೆಟದೂರು ಎಂಬಾತನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಯುವತಿಯನ್ನು ಪ್ರೀತಿಸಲು ಕೇಳುತ್ತಾನೆ. ಇದಕ್ಕೆ ಒಪ್ಪದ ಯುವತಿ ಸೌಮ್ಯವಾಗಿಯೇ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ನಾನು ಓದುತ್ತಿರುವೆ ಮತ್ತು ಮನೆಯ ಪರಿಸ್ಥಿತಿಯ ಬಗ್ಗೆ ಹಂಚಿಕೊಳ್ಳುತ್ತಾಳೆ. ಇದರಿಂದ ಬೇಸರಗೊಂಡ ಪ್ರವೀಣ ತಡಸ ಗ್ರಾಮದ ತಾಯವ್ವನ ಗುಡಿಯ ಬಳಿ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾನೆ.
ಸ್ಥಳೀಯರು ಧಾವಿಸಿ ಬರುವುದರೊಳಗೆ ಪೂರ್ತಿ ದೇಹವು ಸುಟ್ಟಿದ್ದು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ಯುವತಿಯ ಯಾವುದೇ ತಪ್ಪು ಇರುವುದಿಲ್ಲ. ಕಾರಣ ಆಕೆಯೂ ಮೊದಲೇ ಸ್ಪಷ್ಟವಾಗಿ ತನ್ನ ವಿಚಾರ ವ್ಯಕ್ತಪಡಿಸಿದ್ದಾಳೆ. ಮತ್ತು ಆಸ್ಪತ್ರೆಯ ವರೆಗೂ ಯುವತಿ ಹೋಗಿದ್ದು, ನಂತರ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ ಮೃತಪಟ್ಟಿದ್ದಾನೆ ಎಂದು ತಡಸ ಪೊಲೀಸ್ ಅಧಿಕಾರಿಗಳು ಈದಿನ.ಕಾಮ್ ಗೆ ಮಾಹಿತಿ ನೀಡಿದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು
ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.