ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿನಿಯೋರ್ವಳಿಗೆ ಯುವಕನೋರ್ವ ಮನಬಂದಂತೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಾಲೇಜಿನ ವರಾಂಡದಲ್ಲಿ ಮಾಸ್ಕ್ ಹಾಕಿಕೊಂಡು ಬಂದ ಯುವಕನೋರ್ವ ಎಂಸಿಎ ವಿದ್ಯಾರ್ಥಿನಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠಳಿಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆ ನಡೆದ ಕೂಡಲೇ ಆಕೆಯನ್ನ ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೇ, ಚಾಕುವಿನಿಂದ ಇರಿದ ಯುವಕನನ್ನು ಕೂಡಲೇ ಬಂಧಿಸಿರುವುದಾಗಿ ತಿಳಿದುಬಂದಿದೆ. ಚೂರಿ ಇರಿದ ಯುವಕನನ್ನು ಅದೇ ಕಾಲೇಜಿನ ವಿದ್ಯಾರ್ಥಿ ಫಯಾಝ್ ಎಂದು ಗುರುತಿಸಲಾಗಿದೆ. ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಹಾಡಹಗಲೇ ಹುಬ್ಬಳ್ಳಿಯಲ್ಲಿ ನಡೆದ ಇಂತಹದೊಂದು ಘಟನೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಘಟನಾ ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.
