ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, 10 ಜನ ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೊನಿ ಈಶ್ವರ ದೇವಸ್ಥಾನದ ಅಯ್ಯಪ್ಪ ಸನ್ನಿಧಿಯಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ 1.30ರ ವೇಳೆ ಈ ಘಟನೆ ಸಂಭವಿಸಿದ್ದು, ಗಾಯಗೊಂಡ ಮಾಲಾಧಾರಿಗಳನ್ನು ಕೆಎಂಸಿ-ಆರ್‌ಐಗೆ ದಾಖಲಿಸಿದ್ದಾರೆ. ಬಹುತೇಕ ಎಲ್ಲರ ದೇಹ ಶೇ 50 ರಷ್ಟು ಸುಟ್ಟಿದ್ದು, 58 ವರ್ಷದ ವೃದ್ಧರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾರಕೇರ(12), ಪ್ರಕಾಶ ಬಾರಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26) ಮತ್ತು ಶಂಕರ ರಾಯನಗೌಡ್ರ(29) ಗಾಯಗೊಂಡವರು ಎಂದು ತಿಳಿದುಬಂದಿದೆ.
ಅಯ್ಯಪ್ಪ ಮಾಲೆ ಧರಿಸಿ ವೃತ ಆಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಉರುಳಿದ ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ, ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ತಗುಲಿದೆ. ಆಗ ಒಮ್ಮೆಲೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸ್ನಾನ ಮಾಡಲು ನೀರು ಹಾಗೂ ಅಡುಗೆ ಮಾಡಿಕೊಳ್ಳಲು ಸಿಲೆಂಡರ್ ಇಟ್ಟುಕೊಂಡಿರುತ್ತಾರೆ. ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ವರದಿ ಓದಿದ್ದೀರಾ? ಬೆಳಗಾವಿ | ಆಸ್ತಿಗಾಗಿ ಜಗಳ: ತಮ್ಮನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೈದ ಸಹೋದರ
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.