ಹುಬ್ಬಳ್ಳಿ ವಿಭಾಗದ ವ್ಯಾಸನಕೇರಿ ಮತ್ತು ವ್ಯಾಸ ಕಾಲೋನಿ ರೈಲ್ವೆ ನಿಲ್ದಾಣದ ನಡುವೆ ನ.16ರ ಸಂಜೆ 4.08ಕ್ಕೆ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹಳಿ ಬಿಟ್ಟು ಕೆಳಗೆ ಇಳಿದಿರುವ ಬೋಗಿಗಳನ್ನು ಸರಿಪಡಿಸಲು ತಂಡವನ್ನು ಕಳುಹಿಸಿಕೊಡಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಹೊಸಪೇಟೆ, ಹರಿಹರ ಪ್ಯಾಸೆಂಜರ್ ವಿಶೇಷ ರೈಲು ಸಂಚಾರವನ್ನು ನವೆಂಬರ್ 17, 18ರಂದು ರದ್ದುಮಾಡಲಾಗಿದೆ. ಹರಿಹರ-ಹೊಸಪೇಟೆ ಪ್ಯಾಸೆಂಜರ್ ವಿಶೇಷ ರೈಲು ಸಂಚಾರವನ್ನು ನವೆಂಬರ್ 17ರಿಂದ ಮೂರು ದಿನಗಳ ಕಾಲ ರದ್ದುಮಾಡಲಾಗಿದೆ.
ಬಳ್ಳಾರಿ-ಹರಿಹರ-ಬಳ್ಳಾರಿ ಡೆಮೋ ವಿಶೇಷ ರೈಲು, ಹೊಸಪೇಟೆ-ಬಳ್ಳಾರಿ-ಹೊಸಪೇಟೆ ಡೆಮೋ ವಿಶೇಷ ರೈಲು ಸಂಚಾರವನ್ನು ನವಂಬರ್ 17, 18ರಂದು ರದ್ದು ಮಾಡಲಾಗಿದೆ. ಯಶವಂತಪುರ-ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಾರ್ಗವನ್ನು ಬದಲಾಯಿಸಿ, ಹೊಸಪೇಟೆ, ಬಳ್ಳಾರಿ, ದಂಡುಪ್ರದೇಶ, ರಾಯದುರ್ಗ, ಚಿಕ್ಕಜಾಜೂರು ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಮತ್ತು ರೈಲ್ವೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.