ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಜನವರಿ 9ರಂದು ದಲಿತಪರ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳಿಂದ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ನೀಡಿದ್ದು ಇದೀಗ ಬಹುತೇಕ ಯಶಸ್ವಿಯಾಗಿದೆ.
ಬಿಜೆಪಿಯವರಿಂದ ಏನಾದರೂ ಒಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತದೆ. ಕೋಮುವಾದ, ಅವಹೇಳನಕಾರಿ ಹೇಳಿಕೆ ನೀಡುವುದು ಅವರಿಗೆ ರೂಢಿಗತವಾಗಿಬಿಟ್ಟಿವೆ ಏನೋ ಅನಿಸುತ್ತದೆ. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ವಿರುದ್ಧ ಬೆಳಿಗ್ಗೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಮತ್ತು ಧಾರವಾಡದ ಜುಬಿಲಿ ವೃತ್ತ ಮೂಲಕ ಪ್ರಾರಂಭವಾದ ಬಂದ್ ಹೋರಾಟವು ಹುಬ್ಬಳ್ಳಿಯಲ್ಲಿ ಅಮಿತ್ ಶಾ ರೂಪದ ಚಂಡನ್ನು ತಯಾರಿಸಿ ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದ ವರೆಗೆ ಚಂಡಾಟ ಆಡುತ್ತ, ಅಂಬೇಡ್ಕರ್ ಗೀತೆಗಳ ಡಿಜೆಗೆ ಕುಣಿಯುತ್ತ, ಅಮಿತ್ ಶಾ ವಿರುದ್ಧ ದಿಕ್ಕಾರದ ಘೋಷಣೆ ಕೂಗುತ್ತ ಸಾಗಿದರು. ನಂತರ ಅಮಿತ್ ಶಾ ಪ್ರತಿಕೃತಿಯ ಶವಯಾತ್ರೆ ಮಾಡುವ ಮೂಲಕ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಮೊದಲೇ ಬಂದ್’ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಹೊಟೆಲ್’ಗಳು, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್’ಗೆ ಬೆಂಬಲ ನೀಡಿದರು. ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಸಾರಿಗೆ ಬಸ್, ಚಿಗರಿ ಬಸ್, ಬೇಂದ್ರೆ ಬಸ್ಸುಗಳು ಬೆಳಿಗ್ಗೆ 6 ಗಂಟೆಯಿಂದ ಸಂಚಾರ ಸ್ಥಗಿತಗೊಳಿಸಿ ಬಂದ್ ಯಶಸ್ವಿಗೆ ಕೈಜೋಡಿಸಿದರು. ಇನ್ನು ಬಂದ್ ಹೋರಾಟದಲ್ಲಿ ಬಿಜೆಪಿಗರು ಮತ್ತು ಬಿಜೆಪಿಯನ್ನು ಬೆಂಬಲಿಸುವ ಕೆಲವು ದಲಿತ ಸಮುದಾಯದವರನ್ನು ಹೊರತುಪಡಿಸಿದರೆ; ವಿವಿಧ ಸಂವಿಧಾನ ಪ್ರೇಮಿಗಳು, ವಿವಿಧ ಪ್ರಗತಿಪರ ಸಂಘಟನೆಗಳು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರು, ಕುರುಬರು, ಲಿಂಗಾಯತರು, ಹಿಂದುಳಿದ ವರ್ಗ ಹೀಗೆ ಜಾತಿ, ಮತ, ಪಕ್ಷಬೇದ ಮರೆತು ಎಲ್ಲರೂ ಬೆಂಬಲ ನೀಡಿದರು. ಜಿಲ್ಲೆಯ ವಿವಿಧ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಿಂದ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿದ್ದರು.

ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ನಮಗೆ ಅಂಬೇಡ್ಕರ್ ಅಂದರೆ ನಮ್ಮ ಪ್ರಾಣ. ಅಂತಹ ಮಹಾನಾಯಕರ ಬಗ್ಗೆ ಮಾತನಾಡಿದ ಅಮಿತ್ ಶಾ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ತುಳಿತಕ್ಕೊಳಗಾದವರಿಗೆ ಸಾಮಾಜಿಕ, ಆರ್ಥಿಕ ಇತ್ಯಾದಿ ನ್ಯಾಯವನ್ನು ನೀಡಲು ಅಂಬೇಡ್ಕರ್ ಅವರೇ ಬರಬೇಕಾಯಿತು ಹೊರತು ಯಾವ ದೇವರೂ ದಮನಿತರ ಪರ ನಿಲ್ಲಲಿಲ್ಲ. ಸಂವಿಧಾನದ ಅಡಿಯಲ್ಲಿ ಲೋಕಸಭೆಯಲ್ಲಿ ಪ್ರಮಾಣ ವಚನ ಮಾಡಿ ಅಧಿಕಾರದಲ್ಲಿದ್ದು, ಅಂಬೇಡ್ಕರ್ ಬಗ್ಗೆ ಮಾತನಾಡುವುದು ಅಕ್ಷ್ಯಮ್ಯ ಮತ್ತು ಅಂತವರಿಗೆ ನಾಚಿಕೆ ಆಗಬೇಕು ಎಂದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮುತ್ತಣ್ಣ ಮಾತನಾಡಿ, ಅಮಿತ್ ಶಾ ಹೇಳಿಕೆಯು ಇಡೀ ದೆಶಕ್ಕೆ ಮಾರಕ ಮತ್ತು ದೇಶದ ಪ್ರತಿ ವ್ಯಕ್ತಿಗೂ ಮಾಡುವ ಅಪಮಾನವಾಗಿದೆ. ಇವತ್ತು ನರೇಂದ್ರ ಮೋದಿಯವರ ಸರ್ಕಾರ ಸಂಘಪರಿವಾರದ ಆಶಯದಂತೆ ನಡೆಯುತ್ತಿದೆ. ದೇಶ ಸ್ವತಂತ್ರವಾಗಲು ಇಲ್ಲಿರುವ ಮೂಲನಿವಾಸಿ ಎಲ್ಲ ಸಮುದಾಯಗಳು ಕೈಜೋಡಿಸಿ ಪ್ರಾಣ ತೆತ್ತಿದ್ದಾರೆ. ಆದರೆ ಒಬ್ಬರೇ ಒಬ್ಬ ಸಂಘಪರಿವಾರದ ಮುಖಂಡರಾಗಲು, ನಾಯಕರಾಗಲಿ ಸ್ವತಂತ್ರ ಸಮಗ್ರಾಮದಲ್ಲಿ ಪಾಲ್ಗೊಂಡಿಲ್ಲ. ಅಂತವರು ನಮ್ಮ ಹೆಮ್ಮೆಯ ಭಾರತದ ರತ್ನ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ದೆಶದ್ರೋಹದ ಕಾರ್ಯವಾಗಿದೆ ಎಂದು ಗುಡುಗಿದರು.

ಶಮೀಮ್ ಮುಲ್ಲಾ ಮಾತನಾಡಿ, ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ ಇಡೀ ದೆಶಕ್ಕೇ ಮಾಡುವ ಅವಮಾನವಾಗಿದೆ. ಈ ವಿಷಯದಲ್ಲಿ ಯಾವ ಪಕ್ಷದವರು ಇದ್ದರೂ ಮುಲಾಜಿಲ್ಲದೆ ತಿರಸ್ಕಾರ ಮಾಡಬೇಕು ಎಂದರು. ಕೆಪಿಸಿಸಿ ಸದಸ್ಯ ಬಿ ಎಮ್ ದೊಡಮನಿ ಮಾತನಾಡಿ, ಸಂವಿಧಾನ ಇರದೇ ಹೋಗಿದ್ದರೆ ಅಮಿತ್ ಶಾ ಯಾವ ಮೂಲೆಯಲ್ಲಿ ಇರುತ್ತಿದ್ದರೊ ಏನೋ? ಇನ್ನಾದರೂ ಬಿಜೆಪಿ ಮತ್ತು ಮೋದಿ ಎಚ್ಚೆತ್ತುಕೊಂಡು ಅಮಿತ್ ಸಾ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕ ಹೋರಾಟ ಸಮಿತಿಯ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದಿಂದ ಉನ್ನತ ಸ್ಥಾನದಲ್ಲಿರುವ ಅಮಿತ್ ಶಾ ಅವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೆ? ಒಮ್ಮೆ ಸಂವಿಧಾನ ಸುಡುವ ಹೇಳಿಕೆ ಕೊಡುವುದು, ಮತ್ತೊಂದು ಕಡೆ ಅಂಬೇಡ್ಕರ್ ಅಂಬೇಡ್ಕರ್ ಅಂತ ಹೇಳುವುದು ಫ್ಯಾಶನ್ ಆಗಿದೆ ಎಂಬ ಅಪಮಾನಕರ ಮಾತುಗಳನ್ನಾಡುವುದು ನಿಮಗೆ ಶೋಭೆ ತರುವುದೇ? ಇಂದು ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಹೀಗೆ ಮುಂದುವರೆದರೆ ನಿಮಗೆ ತಕ್ಕಪಾಠವನ್ನು ಜನರೇ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪಾದಚಾರಿ ಮಹಿಳೆಯ ₹1.20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ
ಇನ್ನಾದರೂ ಬಿಜೆಪಿಯವರು ಅಂಬೇಡ್ಕರ್ ಮತ್ತು ಸಂವಿಧಾನ ವಿರುದ್ಧ ಮಾತನಾಡುವ ಸಾಹಸಕ್ಕೆ ಕೈಹಾಕುವುದನ್ನು ನಿಲ್ಲಿಸಬೇಕು. ಬಂದ್ ಎಚ್ಚರಿಕೆಯ ಮೂಲಕವಾದರೂ ಬುದ್ದಿ ಕಲಿಯಲಿ. ಅಂಬೇಡ್ಕರ್ ಅವರ ಮಹತ್ವವನ್ನು ತಿಳಿಯಲಿ ಎಂಬುದು ಎಲ್ಲರ ಧ್ವನಿಯಾಗಿತ್ತು.