ಹುಬ್ಬಳ್ಳಿ ಮಾನವ ಹಕ್ಕುಗಳ ಘಟಕದ ವತಿಯಿಂದ ಯುಎಪಿಎ ನಂತಹ ಕಾನೂನುಗಳ ಮೂಲಕ ಅಲ್ಪಸಂಖ್ಯಾತರನ್ನು ವಿನಾಕಾರಣ ಶೋಷಿಸಲಾಗುತ್ತಿದೆ. ಕಾನೂನಿನ ದುರ್ಬಳಕೆ ಮಾಡಲಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಹೇಳಿದ್ದಾರೆ.
ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಭಾರತವು ಜಾತಿ, ಮತ, ಪಂಥಗಳ ಗಡಿ ದಾಟಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. 300 ವರ್ಷಗಳ ಕಾಲ ಆಳಿದ ಬ್ರಿಟಿಷರನ್ನು ದೇಶದಿಂದ ಓಡಿಸುವಲ್ಲಿ ಯಶಸ್ಸಾಗಿದೆ. ಕೋಮುದ್ವೇಷವ ಕಿತ್ತೊಗೆದು ಭಾವೈಕ್ಯತೆಯ ಸಾಧಿಸಿದೆ. ಇಲ್ಲಿ ಸರ್ವರೂ ಒಂದಾಗಿ ನಡೆದಿದ್ದೇವೆ” ಎಂದರು.
“ಬದಲಾದ ಕಾಲಘಟ್ಟದಲ್ಲಿ ಜಾತಿಯ ಪೆಡಂಬೂತಗಳು ದೇಶದಲ್ಲೆಡೆ ಹರಡಿ ಜಾತಿ ವೈಷಮ್ಯ ಬೆಳೆಯಲು ಕಾರಣವಾಗಿದೆ. ಸಮಾನತೆಯ ಸಾಧಿಸಿದರೂ ಕೆಲವು ಪಟ್ಟಭದ್ರರಿಂದ ಜಾತಿ ತಾರತಮ್ಯ ಉಂಟಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಭಾರತ ಸಂವಿಧಾನದ ಮೂಲ ಆಶಯವೂ ನಾಶವಾಗುವ ಸ್ಥಿತಿಗೆ ತಲುಪಿದೆ. ಹೀಗಾಗಿ, ಸಂವಿಧಾನದ ಸರ್ವ ಸಮಾನತೆಯ ಆಶಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸುನೀಲ್ ಸಾಂಡ್ರಾ, ಗುರುನಾಥ ಉಳ್ಳಿಕಾಶಿ, ಪ್ರಕಾಶ ಕುರಹಟ್ಟಿ, ಈಶ್ವರ ಶಿರಸಂಗಿ, ಎಂ ಐ ಕಾಟೇವಾಡಿ, ಅನಿತಾ ಗುಂಜಾಳ, ಎಚ್ ಎಂ ಕೊಪ್ಪದ, ಸುರೇಶ ಸೊಪ್ಪಿನ, ಗೌತಮ ಹರಿವಾಣ ಇದ್ದರು.