ಜನರಲ್ಲಿ ಸಂಶಯ ಬರಬಾರದೆಂದು ಐದು ವರ್ಷದ ಮಗುವನ್ನು ಕಂಕುಳಲ್ಲಿಟ್ಟುಕೊಂಡು ಸ್ಕೂಟಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರು ಕಳ್ಳರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ರೇಷ್ಮಾ ಗುಡಗೇರಿ, ಆಸ್ಮಾಬಾನು ಮುಲ್ಲಾ, ರವಿ ಬಣಸೋಡೆ, ಮುಬಾರಕ್ ಬಾಗವಾನ್, ದಸ್ತಗೀರ್ ಧಾರವಾಡ ಎಂಬುವವರೇ ಬಂಧಿತ ಆರೋಪಿಗಳು.
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 12 ವಿವಿಧ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಗಳ ವಿರುದ್ಧ ಜಿಲ್ಲೆಯಲ್ಲದೇ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದ್ದು, ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 7, ಕೇಶ್ವಾಪೂರ ಠಾಣೆಯಲ್ಲಿ 3, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿತರಿಂದ ಸುಮಾರು 6 ಲಕ್ಷ ರೂ ಮೌಲ್ಯದ 10 ವಿವಿಧ ಕಂಪನಿಯ ಸ್ಕೂಟಿಗಳು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಮಾಡುವ ಸಂದರ್ಭದಲ್ಲಿ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಮಹಿಳೆಯರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಮೂಲಕ ಆರೋಪಿತರು ಬೈಕ್ ಕಳ್ಳತನ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.
ಆರೋಪಿ ರೇಷ್ಮಾ ಕಿಮ್ಸ್ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ನಕಲಿ ಕೀ ಬಳಿಸಿ ಕಳವು ಮಾಡುತ್ತಿದ್ದಳು. ಕದ್ದ ವಾಹನಗಳನ್ನು ಜನರಿಗೆ ಅಡಚಣೆ ಹೆಸರಿನಲ್ಲಿ ಆಸ್ಮಾ ಬಾನು ಹಾಗೂ ಮುಬಾರಕ್ ನಕಲಿ ನಂಬರ್ ಫಲಕಗಳ ಬಳಸಿ, ದಾಖಲಾತಿಗಳಲಿಲ್ಲದೆ ಜನರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಾದ ರವಿ ಹಾಗೂ ರೇಷ್ಮಾ ಇಬ್ಬರನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಕಿಮ್ಸ್ ಹಿಂಭಾಗದಲ್ಲಿ ಬಂಧಿಸಿದ್ದಾರೆ. ಬಳಿಕ ಇವರಿಬ್ಬರ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಇನ್ನೂ ಮೂವರು ಇರುವುದನ್ನು ಬಾಯಿಬಿಟ್ಟಿದ್ದಾರೆ. ಬಳಿಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾರಟಗಿ | ವರ್ಷಗಳಿಂದ ದುರಸ್ತಿಯೇ ಆಗದ ರಸ್ತೆ: ಗ್ರಾಮಸ್ಥರ ಗೋಳು ಕೇಳುವವರಾರು?
ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್, ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್‍ಐ ಶ್ರೀಮಂತ ಹುಣಸಿಕಟ್ಟಿ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇದ್ದರು.
