134 ಪೌರಕಾರ್ಮಿಕರ ನೇರ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುವಂತೆ ಹಾಗೂ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಮತ್ತು ವಿವಿಧ ಹಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎದುರು ಕೈಗೊಂಡ ಅನಿರ್ನಿಧಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೃಹತ್ ಆರಬೆತ್ತಲೆ ಮೆರವಣಿಗೆ ಮೂಲಕ ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ರಾಜ್ಯ ಸರ್ಕಾರ ಹೋರಡಿಸಿರುವ 4 ನೇಮಕಾತಿ ಅಧಿಸೂಚನೆ ಅನ್ವಯ ಪಾಲಿಕೆಯ 870 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ತಕ್ಷಣ 134 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಬೇಕು. ಪಾಲಿಕೆ ಸಾಮಾನ್ಯ ಸಭೆಯ ಠರಾವು ಅನ್ವಯ ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ನೀಡಬೇಕು. ಅಲ್ಲದೇ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕು. ಕನಿಷ್ಠ ವೇತನ ವ್ಯತ್ಯಾಸ ಬಾಕಿ ರೂ 9ಕೋಟಿ ಪಾವತಿಸಬೇಕು. 868 ಮಹಿಳಾ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್ ಮೊತ್ತ ರೂ 21.70 ಲಕ್ಷ ಪಾವತಿಸಬೇಕು. ಪಿಎಫ್ ಬಾಕಿ ಮೊತ್ತ ರೂ 3ಕೋಟಿ ಪಾವತಿಸಬೇಕು. ತುಟ್ಟಿ ಬತ್ತೆ ಬಾಕಿ ರೂ 2 ಕೋಟಿ ಪಾವತಿಸಬೇಕು. ಅಲ್ಲದೇ ಸರ್ಕಾರದ ಆದೇಶದಂತೆ ಒಂದು ದಿನ ಪೂರ್ತಿ ರಜೆ ನೀಡಬೇಕು ಎಂದು ಆಗ್ರಹಿಸಿದರು.
ನಾಳೆ ಮುಖ್ಯಮಂತ್ರಿಗಳು ಹುಬ್ಬಳ್ಳಿಗೆ ಬರುತಿದ್ದು ಅವರೇ 2017 ರಲ್ಲಿ ಹೊರಡಿಸಿದ ಆದೇಶ ಪಾಲಿಕೆಯಲ್ಲಿ ಜಾರಿ ಮಾಡದೆ ಗುತ್ತಿಗೆ ಮುಂದುವರಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಲೇ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಡಿ. 18ನೇ ತಾರೀಖೆಗೆ ಸುವರ್ಣಸೌದಕ್ಕೆ ಮುತ್ತಿಗೆ ಹಾಕುತೇವೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಜಾತಿವಾದಿ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರನ್ನು ವರ್ಗಾವಣೆ ಮಾಡಿ, ಐಎಎಸ್ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತಪ್ಪಿದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ಧಾರವಾಡ | ಅಡೆತಡೆಗಳನ್ನು ಎದುರಿಸಿದಾಗಲೇ ಜಯಶಾಲಿ ಆಗಲು ಸಾಧ್ಯ: ಎನ್.ಶಶಿಕುಮಾರ್
ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ರಾಜು ನಾಗರಾಳ, ಮಹಾದೇವಿ ಮಾದರ, ಶಾಂತವ್ವ ದೊಡ್ಡಮನಿ, ಸುಮಿತ್ರಾ ಹೊಸಳ್ಳಿ, ಗೋಪಿ ಬಿಂದಗಿ, ಆನಂದ ಗೊಲ್ಲರ, ಕಸ್ತೂರಿ ಕೊಣ್ಣೂರ್, ರಾಕೇಶ್ ಚುರಮುರಿ, ಪರಶುರಾಮ್ ಶಿಕ್ಕಲಗಾರ, ಯಲಮ್ಮ ಗೊಲ್ಲರ, ಸುನೀಲ್ ದೊಡ್ಡಮನಿ, ಲಕ್ಷ್ಮೀ ಗೊಲ್ಲರ ಇನ್ನುಳಿದ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.