ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ರುದ್ರಭೂಮಿಯಲ್ಲಿ ಅಕ್ರಮವಾಗಿ ಇಂದಿರಾ ಕ್ಯಾಂಟೀನ್ ಕಟ್ಟಿದ್ದಾರೆ ಎಂದು ಆರೋಪಿಸಿ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಲ್ಲಿಂದ ಕ್ಯಾಂಟೀನ್ ತೆರವುಗೊಳಿಸಲು ಒತ್ತಾಯಿಸುತ್ತಿದೆ.
ಇಂದಿರಾ ಕ್ಯಾಂಟೀನ್; ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ , ತಮಿಳುನಾಡಿನ ಅಮ್ಮ ಉಣವಾಗಮ್‌ನಿಂದ ಪ್ರೇರಿತವಾಗಿ ಕರ್ನಾಟಕ ಸರ್ಕಾರದ ಆಹಾರ ಸಬ್ಸಿಡಿ ಕಾರ್ಯಕ್ರಮ ಆಗಿದೆ. ಮತ್ತು ಭಾರತದ ಮೊದಲ ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಇಂತಹ ಇಂದಿರಾ ಕ್ಯಾಂಟೀನ್ ಸಾಕಷ್ಟು ಪರ-ವಿರೋಧದ ನಡುವೆಯೂ ತನ್ನ ಸೇವೆ ಸಲ್ಲಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹ.
ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿರುವ ಸತ್ಯ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣವಾಗುತ್ತಿದ್ದು, ರುದ್ರಭೂಮಿ ಅಭಿವೃದ್ಧಿ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಹಾಗೂ ಬಿಜೆಪಿ ಮುಖಂಡರು ಸ್ಮಶಾನದ ಭೂಮಿಯಿಂದ ಇಂದಿರಾ ಕ್ಯಾಂಟೀನ್ ಅನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ಈಗಾಗಲೇ ಪತ್ರಿಕಾಗೋಷ್ಠಿ, ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ಹಾಕಿರುವ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ವಿರೋಧಿ ಎಂಬ ಧಿಕ್ಕಾರದ ಘೋಷಣೆ ಕೂಗಿದ್ದೂ ಆಗಿದೆ. ಇದಕ್ಕೆಲ್ಲ ಪ್ರತ್ಯುತ್ತರ ಎಂಬಂತೆ ಶಾಸಕ ಪ್ರಸಾದ್ ಅಬ್ಬಯ್ಯ, “ಸ್ಥಳೀಯರು ಈ ಕುರಿತು ವಿರೋಧ ಮಾಡಿದರ ಆ ಕಟ್ಟಡವನ್ನು ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು” ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಸೇರಿದ ಈ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದಾರೆ. ಬಡವರಿಗೆ ಅನುಕೂಲವಾಗಲೆಂದು ನಿರ್ಮಿಸಿದ ಕಟ್ಟಡಕ್ಕೆ ನಮ್ಮವರೇ ವಿರೋಧ ಮಾಡುತ್ತಿರುವುದು ವಿಷಾದವೆನಿಸುತ್ತದೆ. ಇದರ ಹಿಂದೆ ಕಾಣದ ಕೈಗಳ ರಾಜಕೀಯ ಕುತಂತ್ರವಿದೆ. ಮತ್ತು ವಿರೋಧ ಮಾಡುತ್ತಿರುವವರಲ್ಲಿ ಬೆರಳೆಣಿಕೆಯಷ್ಟು ಸ್ಥಳೀಯರಿದ್ದರೆ, ಬಹುತೇಕರು ನಗರದ ವಿವಿಧ ಬಡಾವಣೆಯವರು ಎಂಬುದು ಅಚ್ಚರಿಯ ವಿಷಯ.
ಸ್ಥಳೀಯರಿಗೆ ಈ ಕ್ಯಾಂಟೀನ್ ಬಗ್ಗೆ ಸ್ವಾಗತವಿದೆ. ಕಪ್ಪುಚುಕ್ಕೆಯಿಲ್ಲದ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ಹೇಗಾದರೂ ಮಾಡಿ ಎಳೆದಾಡಬೇಕೆಂದು ಕೆಲವರು ಸಂಚು ಮಾಡುತ್ತಿದ್ದಾರೆ ಎನಿಸುತ್ತದೆ. ವಿರೋಧ ಮಾಡಲು ಕಾರಣಗಳಿಲ್ಲದೆ ಸಮುದಾಯ ಮತ್ತು ಕೆಲವು ಧಾರ್ಮಿಕ ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಹರಿಬಿಡುತ್ತಿದ್ದಾರೆ. ಅದರ ಪರಿಣಾಮ. ಸ್ಮಶಾನದಲ್ಲಿ ಊಟ ಮಾಡುವುದು ತಪ್ಪು. ಅಲ್ಲಿಂದ ಕ್ಯಾಂಟೀನ್ ತೆರವುಗೊಳಿಸಬೇಕು ಎಂದು ಸ್ಥಳೀಯ ಕೆಲವರು ಹೇಳುತ್ತಿದ್ದಾರೆ.
ಸ್ಥಳೀಯ ಸಮಸ್ಯೆಗೆ ದೂರದಿಂದ ದೊಡ್ಡವರನ್ನು ಕರೆಸಿ ಮಾತನಾಡಿಸಿದ ಕಾರಣ ಸ್ಥಳೀಯರ ಮೇಲೆ ಕೆಟ್ಟ ಪರಿಣಾಮ ಬೀರಲು ಸಾಧ್ಯವಾಗಿದೆ. ಬೇರೆ ಬೇರೆಯವರನ್ನು ಕರೆಸುವ ಅವಶ್ಯವಿರಲಿಲ್ಲ. ಇದರ ಹಿಂದೆ ಕೋಮುಗಲಭೆ ಎಬ್ಬಿಸುವ ಹುನ್ನಾರವಿದೆ. ಇಲ್ಲಿನ ಜನರು ಸಾಮರಸ್ಯದಿಂದ ಬಾಳುತ್ತಿದ್ದಾರೆ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದ
ಹೆಸರು ಹೇಳಲಿಲ್ಛಿಸದ ಸ್ಥಳೀಯ ಮಹಿಳೆಯೋರ್ವರು ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಇಂದಿರಾ ಕ್ಯಾಂಟೀನ್ ಬೇಡವೇ ಬೇಡ. ಏಕೆಂದರೆ ನಮ್ಮದೇ ಒಂದು ಹೋಟೆಲ್ ಇದೆ. ಅಲ್ಲಿಯೇ ನಡೆಯುತ್ತದೆ. ಹೀಗಾಗಿ ಮತ್ತೊಂದು ಕ್ಯಾಂಟೀನ್ ಏಕೆ? ಅದರಲ್ಲೂ ಸ್ಮಶಾನದಲ್ಲಿ ಮಾಡುವುದು ಸರಿಯೆ?” ಎಂದರು.
ಕ್ಯಾಂಟೀನ್ ನಿರ್ಮಾಣದಲ್ಲಿ ಯಾವುದೇ ರೀತಿಯ ವ್ಯಯಕ್ತಿಕ ಹುನ್ನಾರಗಳಿಲ್ಲ. ಮತ್ತು ಭೂಮಿ ಅತಿಕ್ರಮಣ ಮಾಡುವುದೂ ಅಲ್ಲ. ಬದಲಾಗಿ, ಹೆದ್ದಾರಿ ಆಗಿರುವ ಕಾರಣ ಜನರಿಗೆ ಅನುಕೂಲವಾಗುತ್ತದೆ. ಈ ಪ್ರದೇಶದಲ್ಲಿರುವವರು ಯಾರೂ ಶ್ರೀಮಂತರಲ್ಲ. ಬಹುತೇಕರು ಬಡವರೇ ಇದ್ದಾರೆ. ಹೀಗಾಗಿ, ಇಂದಿರಾ ಕ್ಯಾಂಟೀನ್ ಬಡವರಿಗಾಗಿ ನಿರ್ಮಾಣವಾಗಿದೆ. ಬಡವರಿಗಾಗಿಯೇ ಉಪಯೋಗವಾಗುತ್ತದೆ. ಇಂತಹ ಯೋಜನೆಯನ್ನು ವಿರೋಧಿಸುವುದು ನಿಜಕ್ಕೂ ಸರಿಯಲ್ಲ. ಏಕೆ ಹೀಗೆಲ್ಲ ವಿರೋಧಿಸುತ್ತಾರೊ ಗೊತ್ತಿಲ್ಲ. ದಲಿತರನ್ನು ಮುಂದು ಹಾಕಿಕೊಂಡು ಇಂದಿರಾ ಕ್ಯಾಂಟೀನ್ ತೆರವುಗೊಳೊಸಲು ಬಿಜೆಪಿ ಹರಸಾಹಸಪಡುತ್ತಿದೆ ಎಂದು ಸ್ಥಳಿಯರೊಬ್ಬರು ವಿಷಾದ ವ್ಯಕ್ತಪಡಿಸಿದರು ತಮ್ಮ ಹೆಸರು ಹೇಳಲಿಲ್ಲ.
ಯುವ ನಾಯಕ ರಾಜು ನಾಯಕವಾಡಿ ಮಾತನಾಡಿ, ಕ್ಷೇತ್ರದಲ್ಲಿ ಇಂತಹ ಅನೇಕ ಕಟ್ಟಡಗಳು ನಿರ್ಮಾಣವಾಗಿ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಅಂತಹ ಸಂದರ್ಭದಲ್ಲಿ ಹೊಸ ಕಟ್ಟಡವನ್ನೇಕೆ ಕಟ್ಟುತ್ತಾರೆ? ಕಟ್ಟಿ ಹಣವನ್ನೇಕೆ ಪೋಲು ಮಾಡುತ್ತಾರೆ? ಅದೇ ದುಡ್ಡನ್ನು ಬಳಸಿ ಒಳ್ಳೆಯ ರಸ್ತೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಸ್ಥಳೀಯ ಮಹಿಳೆ ನಾಗಮ್ಮ ಎಂಬುವವರು ಮಾತನಾಡಿ, ಇಂದಿರಾ ಕ್ಯಾಂಟೀನ್ ಬದಲು ಅಲ್ಲಿ ಶಾಲಾ ಮಕ್ಕಳಿಗೆ ಆಟದ ಮೈದಾನ ಕಟ್ಟಿಸಬಹುದಿತ್ತು. ಸುಡುಗಾಡಿನಲ್ಲಿ ಊಟ ಮಾಡುವುದು ಸರಿ ಹೊಂದುವುದಿಲ್ಲ ಎಂದರು.
ಕ್ಯಾಂಟೀನ್ ತೆರವುಗೊಳಿಸುವ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಮುಖಂಡ ವಿಜಯ ಗುಂಟ್ರಾಳ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ನಿರಂತರ ತುಳಿಯಲಾಗಿದೆ. ಕೊನೆಗೆ ಸ್ಮಶಾನದಲ್ಲೂ ದೌರ್ಜನ್ಯ ತಪ್ಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಬಡವರಿಗೆ ಅನುಕೂಲವಾಗುತ್ತದೆ ಎನ್ನುವುದು, ಮತ್ತೊಂದು ಕಡೆ ಸ್ಮಶಾನದಲ್ಲಿ ನಿರ್ಮಾಣವಾಗಿರುವುದು. ಅಸಲಿಗೆ ಬಹುತೇಕರಲ್ಲಿ ಸ್ಮಶಾನವೆಂದರೆ ಒಂದು ರೀತಿಯ ಬೆರೆ ವಿಚಾರವೇ ಹೊಳೆಯುತ್ತದೆ. ಅದ್ದರಿಂದ ಶಾಸಕ ಪ್ರಸಾದ್ ಅಬ್ಬಯ್ಯ ಈ ಬಗ್ಗೆ ಮೊದಲೆ ಯೋಚಿಸಬೇಕಿತ್ತೊ ಏನೋ?
ಇನ್ನು, ಮೌಢ್ಯತೆಗೆ ಸಡ್ಡು ಹೊಡೆದು ಸ್ಮಶಾನಗಳಲ್ಲೇ ಅನೇಕ ಕಾರ್ಯಕ್ರಮ ಚಟುವಟಿಕೆಗಳು ಇತ್ತೀಚಿಗೆ ನಡೆದಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸ್ಮಶಾನದಲ್ಲೇ ನಡೆದಿದೆ. ಉದಾಹರಣೆ ಎಂಬಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ರೂಪಿಸಿದ್ದನ್ನು ನೆನೆಯಬಹುದು.
ಇದನ್ನು ಓಧೀಧಧೀರಾ? ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ
ಅದೇನೇ ಇದ್ದರೂ ಇದರ ಮುಂದಿನ ತಿರುವೇನು? ಎಂಬ ಪ್ರಶ್ನೆ ಕಾಡುತ್ತದೆ. ಏಕೆಂದರೆ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಏನಾದಾರು ಒಂದು ಪ್ರಕರಣ, ವಿಷಯಗಳು ಓಡಾಡುತ್ತಿರುತ್ತವೆ. ಆದ್ದರಿಂ, ಯಾವ ಸಮಯದಲ್ಲಿ ಏನಾಗುವುದೆಂಬ ಭಯದ ವಾತಾವರಣದಲ್ಲೇ ಸ್ಥಳೀಯರು ಬದುಕುತ್ತಿದ್ದಾರೆ. ಇನ್ನು, ಈ ಕುರಿತು ಸ್ಥಳೀಯರು ಕೂಡ ಹೆಚ್ಚು ಮಾತನಾಡಲೂ ಕೂಡ ಹೆದರುತ್ತಿದ್ದಾರೆ ಎಂಬುದು ಗಮನಾರ್ಹ. ಏನಾಗುವುದೋ ಕಾದು ನೋಡೋಣ.
