ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನಿಯುಕ್ತಿಗೊಳಿಸುವಂತೆ ವಾರ್ಡ್ ನಂಬರ್ 53ರ ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅವರ ಸ್ಥಾನಕ್ಕೆ ಒಳ್ಳೆ ಐಎಎಸ್ ಅಧಿಕಾರಿಯನ್ನು ನೇಮಿಸುವಂತೆ ಕೋರಿದ್ದಾರೆ.
“ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಪಾಲಿಕೆಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಕೆಲಸ ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತರು ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡದೇ ನೋಡೋಣ ನೋಡೋಣ ಎಂದು ಕಾಲ ದೂಡುತ್ತಿದ್ದಾರೆ. ನಾವು ವಾರ್ಡ್ನಲ್ಲಿ ಜನರಿಂದ ಬೈಸಿಕೊಳ್ಳುತ್ತಿದ್ದೇವೆ. ಹೀಗಾಗಿ ಪಾಲಿಕೆ ಆಯುಕ್ತರನ್ನು ಬದಲಾಯಿಸಿ, ಒಳ್ಳೆ ಅಧಿಕಾರಿಯನ್ನು ಪಾಲಿಕೆಗೆ ನೇಮಿಸಬೇಕು” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವರು ಪತ್ರದಲ್ಲಿ, “ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಆಯುಕ್ತರಾಗಿ ಇದ್ದಂತಹ ಗೋಪಾಲಕೃಷ್ಣ ಬಿ. ಪಾಲಿಕೆಯಿಂದ ವರ್ಗಾವಣೆಯಾದ ನಂತರ ಸದರಿ ಹುದ್ದೆಗೆ ಆಯುಕ್ತರಾಗಿ ಈಶ್ವರ ಉಳ್ಳಾಗಡ್ಡಿ ಬಂದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಹುದ್ದೆಯನ್ನು ಅಲಂಕರಿಸಿದ ನಂತರ ನಾನು ಮತ್ತು ನಮ್ಮ ಪಕ್ಷದ ಹಲವು ಸದಸ್ಯರು, ಮುಖಂಡರು ಈಶ್ವರ ಉಳ್ಳಾಗಡ್ಡಿ ಅವರನ್ನು ಭೇಟಿಯಾಗಿ ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಆದಾಯ ಕ್ರೋಡೀಕರಣದ ಬಗ್ಗೆ ಹೊಸದಾಗಿ ಟ್ಯಾಕ್ಸಿನಲ್ಲಿ ಹೆಸರುಗಳನ್ನು ದಾಖಲಿಸುವುದು, ಎಲ್&ಟಿ ಕಂಪನಿಯವರು ಎಲ್ಲ ವಾರ್ಡಗಳಲ್ಲಿ ಕರ್ತವ್ಯದಲ್ಲಿ ನಿಷ್ಕಾಳಜಿ ಮಾಡುತ್ತಿರುವುದು, ಎಲ್ಲ ವಾರ್ಡಗಳ ಒಳಚರಂಡಿ ವ್ಯವಸ್ಥೆ ಸರಿಪಡಿಸುವುದು, ಸದಸ್ಯರಿಂದ ಸಮರ್ಪಕವಾಗಿ ಸಲಹೆಗಳನ್ನು ತೆಗೆದುಕೊಳ್ಳುವುದು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಯಂ, ನೇರ ವೇತನ ಮತ್ತು ಗುತ್ತಿಗೆ ಪೌರಕಾರ್ಮಿಕರಿಗೆ ಆರೋಗ್ಯ/ಸಲಕರಣಿಗಳ ನೀಡುವುದರ ಬಗ್ಗೆ ಚರ್ಚಿಸಿದೆವು. ಆದರೂ ಅವರು ಕಾಲಹರಣ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ.
“ಆಯುಕ್ತರ ಇಂತಹ ಧೋರಣೆಯಿಂದ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಹಿಂದೆ ಬಿದ್ದಿವೆ. ಅವನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯ ಜನ ವಾರ್ಡ್ ಸದಸ್ಯರಾದ ನಮಗೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಅನುಭವದ ಕೊರತೆ ಇರುವ ಆಯುಕ್ತರಿಂದ ವಾರ್ಡ ಸದಸ್ಯರು ವಾರ್ಡಿನ ಮತದಾರರಿಂದ ಬೈಯಿಸಿಕೊಳ್ಳುವ ಪರಿಸ್ಥಿತಿ ಉದ್ಭವಗೊಂಡಿದೆ” ಎಂದು ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪುರ ಆರೋಪಿಸಿದ್ದಾರೆ.