ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆಗೈದ ಆರೋಪಿ ಫಯಾಝ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಿನ್ನೆ(ಏಪ್ರಿಲ್ 18) ನೇಹಾ ಹಿರೇಮಠ್ ಅವರನ್ನು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನೊಳಗೆ ನುಗ್ಗಿ ಅದೇ ಕಾಲೇಜಿನ ವಿದ್ಯಾರ್ಥಿ ಫಯಾಝ್ ಬರ್ಬರವಾಗಿ ಕೊಲೆಗೈದಿದ್ದ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಾರ್ವಜನಿಕರು ಆಕ್ರೋಶದ ಕಿಡಿ ಹೊತ್ತಿಸಿದೆ. ಹಿಂದೂಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸುತ್ತಿವೆ. ಇನ್ನು ಈ ಘಟನೆಯನ್ನು ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ಖಂಡಿಸಿದೆ. ಅಲ್ಲದೇ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ಘಟನೆಯ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮುಖ್ಯಸ್ಥ ಅಲ್ತಾಫ್, “ನೇಹಾ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಆರೋಪಿ ಫಯಾಝ್‌ನನ್ನು ನಮ್ಮ ಕೈಗೆ ಕೊಡಿ ಅವನ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ ಹಾಕುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ.
“ಫಯಾಝ್‌ನನ್ನು ಎನ್‌ಕೌಂಟರ್ ಮಾಡುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡಬಾರದು. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ” ಎಂದು ಹೇಳಿದರು.
ಅಂಜುಮನ್ ಧಾರವಾಡದ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ನೇತೃತ್ವದ ನಿಯೋಗ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದೆ.
Hubli | Protest by Muslim community demanding severe punishment for the accused Fayaz for stabbing Neha.
The Muslim community strongly condemned the killing of Neha and demanded that the accused be severely punished. The presidents of Alnavara, Kundagola, Kalaghatagi, Hubli and… pic.twitter.com/wFZzhHKrk4— Mohammed Zubair (@zoo_bear) April 19, 2024
“ನಿನ್ನೆ ಬಿ.ವಿ.ಬಿ. ಕಾಲೇಜಿನ ಆವರಣದಲ್ಲಿ ನಡೆದ ನೇಹಾ ನಿರಂಜನ್ ಹಿರೇಮಠರವರ ಭೀಕರ ಕೊಲೆ ಪ್ರಕರಣ ವಿದ್ಯಾಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಧಾರವಾಡ ಜಿಲ್ಲೆಯ ಜನತೆಗೆ ಮತ್ತು ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೆ ತುಂಬ ಆಘಾತ ಉಂಟುಮಾಡಿದೆ. ಆದ ಕಾರಣ ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಖಂಡನೀಯ: ಕರ್ನಾಟಕ ಮುಸ್ಲಿಂ ಯುನಿಟಿ
“ಈ ಘಟನೆಗೆ ಯಾವುದೇ ರೀತಿಯ ರಾಜಕೀಯ ಮತ್ತು ಜಾತಿಯ ಬಣ್ಣ ಬಳಿಯದೇ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಂಡು ಕೊಲೆಗೈದ ಆರೋಪಿಗೆ ಸೂಕ್ತ ಕಠಿಣ ಶಿಕ್ಷೆ ವಿಧಿಸಿ, ಮಗಳನ್ನು ಕಳೆದುಕೊಂಡ ನಿರಂಜನ ಹಿರೇಮಠರವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಹಾಗೂ ಆರೋಪಿಗೆ ಅತೀ ಕಠಿಣವಾದ ಶಿಕ್ಷೆ ನೀಡಬೇಕು” ಎಂದು ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ನಿಯೋಗವು ವಿನಂತಿಸಿದೆ.
