ಪೌರಕಾರ್ಮಿಕರ ಸಂಘದ ಹಲವು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮತ್ತು ಸರ್ಕಾರ, ಜಿಲ್ಲಾಡಳಿತ ಹಾಗೂ ಪಾಲಿಕೆಯ ದಲಿತ ವಿರೋಧಿ ನೀತಿಯ ವಿರುದ್ಧ ಪೌರಕಾರ್ಮಿಕರು ಬಾಯಿ ಬಾಯಿ ಬಡಿದುಕೊಂಡು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, “134 ಮಂದಿ ಪೌರಕಾರ್ಮಿಕರ ನೇರ ನೇಮಕಾತಿ ಬಗ್ಗೆ ಜಿಲ್ಲಾಧಿಕಾರಿಯವರು 2 ಬಾರಿ ಸಭೆ ನಡೆಸಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. 2018ರಲ್ಲಿ ಆಯುಕ್ತರಿಗೆ ನೋಟಿಸ್ ನೀಡಿದ್ದಾರೆ. ನಂತರ ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದು ನೇರ ನೇಮಕಾತಿ ನಿಲ್ಲಿಸಿದ ಪರಿಣಾಮವಾಗಿ ಅರ್ಹ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. 8 ವರ್ಷಗಳಲ್ಲಿ ಅನೇಕ ಪೌರಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಯಾವುದೇ ಪರಿಹಾರವಿಲ್ಲದೆ ಸುಮಾರು 300 ಕುಟುಂಬಗಳು ಬೀದಿಪಾಗಿವೆ. ಆಯುಕ್ತರು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ನೇಮಕಾತಿ ಆದೇಶ ಪತ್ರಗಳನ್ನು ನೀಡಬಹುದು. ಆದರೆ ಅವರು ಯಾರ ಅಪ್ಪಣೆಗೆ ಕಾಯುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ” ಎಂದರು.
“799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ 1 ವರ್ಷದ ಹಿಂದೆ ಪಾಲಿಕೆ ಠರಾವು ಪಾಸ್ ಮಾಡಿದೆ. ಅನುಮೋದನೆ ದೊರಕದಂತೆ ಯಾರು ತಡೆ ಒಡ್ದುತಿದ್ದಾರೆ? ಪೌರಾಕಾರ್ಮಿಕರ ಮೇಲೆ ಯಾಕೆ ದ್ವೇಷ ಸಾಧಿಸುತಿದ್ದಾರೆ? ಸರ್ಕಾರದ ಆದೇಶ ಅನುಷ್ಠಾನ ಮಾಡಬೇಕಿರುವ ಜಿಲ್ಲಾಡಳಿತ ಮತ್ತು ಪಾಲಿಕೆ ಆಡಳಿತ ಸತ್ತು ಹೋಗಿದೆಯೇ? ಸರ್ಕಾರದ ಆದೇಶಗಳು ಧಾರವಾಡ ಜಿಲ್ಲೆಗೆ ಅನ್ವಹಿಸುವದಿಲ್ಲವೇ? ಈ ಬಗ್ಗೆ ಜಿಲ್ಲಾಧಿಕಾರಿಗಳೇ ಸ್ಪಷ್ಟಪಡಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಉಪಹಾರ ಪೂರೈಕೆಗೆ ಠರಾವು ಪಾಸ್ ಮಾಡಿ 6 ತಿಂಗಳು ಗತಿಸಿದರೂ ಉಪಹಾರ ನೀಡದೆ ದಲಿತ ಪೌರಕಾರ್ಮಿಕರನ್ನು ಆಹಾರ ಸೌಲಭ್ಯದಿಂದ ವಂಚಿಸಿದ್ದಾರೆ. ಕಳೆದ ವರ್ಷ ಪೌರಕಾರ್ಮಿಕರ ದಿನಾಚರಣೆಯ ದಿನದಂದು ಪಾಲಿಕೆ, ಪೌರಕಾರ್ಮಿಕರಿಗಾಗಿ 25 ವಿಶ್ರಾಂತಿ ಗೃಹಗಳನ್ನು ಉದ್ಘಾಟನೆ ಮಾಡಿದೆ. ಆದರೆ ಅದಕ್ಕೆ ಅಗತ್ಯ ಮೂಲ ಸೌಲಭ್ಯ ಒದಗಸದಿರುವ ಕಾರಣ ವಿಶ್ರಾಂತಿ ಗೃಹಗಳು ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ. ಸರ್ಕಾರದ ₹2.50 ಕೋಟಿ ಹಣವನ್ನು ನಷ್ಟ ಮಾಡಿದ್ದಾರೆ” ಎಂದು ಆರೋಪಿಸಿದರು.
“ಪ್ರಸ್ತುತ ಚಿಟಗುಪ್ಪಿ ಆಸ್ಪತ್ರೆ ಹಳೆಯ ಕಟ್ಟಡದಲ್ಲಿ ಎಲ್ಲ ಸಂಘಗಳಿಗೆ ಕೊಠಡಿ ನೀಡಿದ್ದಾರೆ. ಆದರೆ ನಮ್ಮ ಸಂಘಕ್ಕೆ ಮಾತ್ರ ದುರುದ್ದೇಶದಿಂದ ನೀಡುತ್ತಿಲ್ಲ. ಸರ್ಕಾರದ ಆದೇಶದಂತೆ ಒಂದು ದಿನದ ಪೂರ್ತಿ ರಜೆ ನೀಡುವ ಬಗ್ಗೆ 6 ತಿಂಗಳ ಹಿಂದೆಯೇ ಒಪ್ಪಿಕೊಂಡಿರುವ ಆಯುಕ್ತರ ಭರವಸೆ ಹುಸಿಯಾಗಿದೆ. 14 ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸದೆ ವಂಚಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ದಲಿತ ಪೌರಕಾರ್ಮಿಕರಿಗೆ ಜಾತಿ ಕಾರಣದಿಂದ ಶೋಷಣೆ ಮಾಡುತ್ತ ಅವರ ಹಕ್ಕುಗಳನ್ನು ದಮನ ಮಾಡುತ್ತಿರುವ ಆಯುಕ್ತರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ-1989ರ ಅನ್ವಯ ಅಟ್ರಾಸಿಟಿ ಕೇಸ್ ದಾಖಲು ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ಹಾವೇರಿ | ಎಂಟನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಪ್ರತಿಭಟನೆಯಲ್ಲಿ ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಪಾರವ್ವ ಹೊಸಮನಿ, ಅನ್ನಪೂರ್ಣ ಜಂಗ್ಲಿ, ರಾಧಾ ಬಾಗಲಾಡ್, ಶಂಕರ್ ರೋಣ, ರೇಣುಕಾ ನಾಗರಾಳ, ಗೋಪಾಲ್ ಸಾಂಬ್ರಾಣಿ, ಅನಿತಾ ಬಮ್ಮನಾಗಿ, ರಾಧಾ ದೊಡ್ಡಮನಿ, ದುರಗಮ್ಮ ಗಬ್ಬುರ, ಅರುಣಮ್ಮ ಪೆನಕಚಾರಲು, ಪರಶುರಾಂ ಶಿಕ್ಕಲಗಾರ, ಪ್ರೇಮಾ ಶಿರಾಸ್ಯಾಳ, ರಮೇಶ ಮಾದರ, ಹುಸೇನಮ್ಮ ನಗರಗುಂಡ, ರೇಣುಕಾ ಸಾಂಬ್ರಾಣಿ ಇದ್ದರು.