ಹುಬ್ಬಳ್ಳಿ ನಗರದ ಮಂಟೂರ ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ರುದ್ರಭೂಮಿಯಲ್ಲಿ ಅಕ್ರಮವಾಗಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ ಎಂದು ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿ ಆರೋಪಿಸಿದೆ.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯ ಮುಖಂಡ ವಿಜಯ ಗುಂಟ್ರಾಳ, ನಗರದ ಮಂಟೂರ ರಸ್ತೆಯ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಕಳೆದ ನೂರಾರು ವರ್ಷಗಳಿಂದ 30ಕ್ಕೂ ಹೆಚ್ಚು ಬಡಾವಣೆಗಳ ಜನರು ಮೃತರ ಅಂತ್ಯಸಂಸ್ಕಾರ ನೆರವೇರಿಸಲು ಉಪಯೋಗಿಸುತ್ತಾ ಬಂದಿದ್ದಾರೆ. ಸದರಿ ಪ್ರದೇಶಲ್ಲಿ ಶೇ. 80% ದಲಿತ ಸಮುದಾಯ, ಹಾಗೂ ಹಿಂದುಳಿದ ಸಮುದಾಯದವರು ವಾಸವಿದ್ದಾರೆ. ಇಂತಹ ಪವಿತ್ರ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ, ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಹೀನ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.
2019ರಲ್ಲಿ ಸ್ಮಶಾನ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸುವ ಹುನ್ನಾರವನ್ನು ತಡೆಗಟ್ಟಲು ನಾವೆಲ್ಲ ಒಗ್ಗಟ್ಟಿನಿಂದ ವಿಫಲಗೊಳಿಸಿದ್ದೇವೆ. ಆದರೆ, 2022ರಲ್ಲಿ ಸ್ಮಶಾನ ಭೂಮಿ ಕಾಂಪೌಂಡ್ ಗೋಡೆಯನ್ನು ಒಡೆದು ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, 100 ಅಡಿ ಜಾಗದಲ್ಲಿ ರಸ್ತೆಯನ್ನು ಕಾನೂನು ಬಾಹಿರವಾಗಿ ನಿರ್ಮಿಸಿದ್ದಾರೆ. ಅಲ್ಲದೆ, ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡು ನಮ್ಮ ಪೂರ್ವಜರ ಸಮಾಧಿಗಳ ಮೇಲೆ ರಸ್ತೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಸ್ಮಶಾನ ಭೂಮಿಯಲ್ಲಿ ‘ಇಂದಿರಾ ಕ್ಯಾಂಟೀನ್’ ನಿರ್ಮಾಣ : ತೆರವುಗೊಳಿಸಲು ಬಿಜೆಪಿ ಹರಸಾಹಸ?
ಶಾಸಕರ ಕಾರ್ಯವೈಖರಿ ಟೀಕಿಸಬೇಕೆಂದರೆ ಚುನಾವಣೆಯಲ್ಲಿ ಅವರಿಗೆ ಮತ ಹಾಕಿರಬೇಕೆಂಬ ನಿಯಮ ಇದೆಯೇ? ಮತ ಹಾಕಿದರೆ ಮಾತ್ರ ಪ್ರಶ್ನೆ ಕೇಳಬೇಕು ಎಂದರೆ, ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಈ ಹಿನ್ನೆಲೆಯಲ್ಲಿ ಶಾಸಕರ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾವಚಿತ್ರ ಸ್ಮಶಾನದಲ್ಲಿ ಹಾಕುವುದು ಅವರಿಗೆ ಮಾಡುವ ಅವಮಾನವಾಗಿದೆ. ಸ್ಥಳೀಯರ ವಿರೋಧ ಇದ್ದರೆ ಬೇರೆಡೆ ಸ್ಥಳಾಂತರ ಮಾಡುತ್ತೇನೆಂದು ಶಾಸಕ ಪ್ರಸಾದ್ ಅಬ್ಬಯ್ಯನವರು ಹೇಳುತ್ತಾರೆ. ಆದರೆ, ಇದೀಗ ವಿರೋಧ ವ್ಯಕ್ತಪಡಿಸುತ್ತಿರುವವರು ನೆರೆ ರಾಜ್ಯ ಅನ್ಯ ದೇಶಗಳಿಂದ ಬಂದವರಾಗಿದ್ದೇವೆಯೇ ಎಂದು ವಿಜಯ ಗುಂಟ್ರಾಳ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿ ಮುಖಂಡರು ಕೂಡ ಹಾಜರಿದ್ದರು.
