ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿಯ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜ.6) ಬೆಳ್ಳಂ ಬೆಳಗ್ಗೆ ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಹಾಸನ ಜಿಲ್ಲೆಯ ಅರಕಲಗೂಡಿನ ಮಣಿಕಂಠ (26), ಪವನ್(23), ಚಂದನ್ (31) ಮತ್ತು ಬೆಂಗಳೂರಿನ ಹರೀಶ್ ಕುಮಾರ್(34) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನದಿಂದ ಗೋವಾಗೆ ತೆರಳುತ್ತಿದ್ದ ಕಾರು ಮತ್ತು ಬೆಂಗಳೂರಿನಿಂದ ಶಿರಡಿಗೆ ತೆರಳುತಿದ್ದ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಬಳಿಕ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಭೇಟಿ ನೀಡಿದ್ದಾರೆ.
ಇನ್ನು ಕಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ಶವಗಳನ್ನು ಕಂಡು ಭಾವುಕರಾದರು. ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನು ಓದಿದ್ದೀರಾ? ಕೆಪಿಎಸ್ಸಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ: ಒಂದು ಬಾರಿ ವಯೋಮಿತಿ ಸಡಿಲಿಕೆಗೆ ಅಸ್ತು
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಲಾಡ್, “ಅನಿರೀಕ್ಷಿತವಾಗಿ ಭೀಕರ ಅಪಘಾತ ಸಂಭವಿಸಿದೆ. ಕಾರು ಅಪಘಾತ ಸಂಭವಿಸಿದ ನಂತರ ರಸ್ತೆ ಬದಿ ನಿಂತವರ ಮೇಲೆ ಲಾರಿ ಹರಿದಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಯಾವ ರೀತಿ ಆಗಿದೆ ಅಂತ ಗೊತ್ತಾಗಿಲ್ಲ. ಮಂಜು ಇತ್ತಾ ಅಂತ ಪರಿಶೀಲನೆ ಮಾಡುತ್ತೇವೆ. ಈ ದುರ್ಘಟನೆ ಸಂಭವಿಸಬಾರದಾಗಿತ್ತು” ಎಂದು ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, “ಇಂದು(ಜ.6) ಮುಂಜಾನೆ ಸುಮಾರು 4ರ ವೇಳೆಗೆ ಮೊದಲು ನಿಂತಿದ್ದ ಒಂದು ಕಾರಿಗೆ ಹಿಂದಿನಿಂದ ಬಂದ ಕ್ರೆಟಾ ಕಾರು ಡಿಕ್ಕಿ ಹೊಡೆದಿತ್ತು. ಅದರಲ್ಲಿ ನಾಲ್ಕು ಮಂದಿಗೆ ಗಾಯಗಳಾಗಿತ್ತು. ಅವರನ್ನು ಕೂಡಲೇ ಆಂಬ್ಯುಲೆನ್ಸ್‌ನ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಕ್ಕಿ ಹೊಡೆದ ಕ್ರೆಟಾ ಕಾರಿನಲ್ಲಿದ್ದವರು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ಬಂದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದವರಿಗೆ ಡಿಕ್ಕಿ ಹೊಡೆದಿದೆ. ಒಟ್ಟು ಐವರು ನಿಂತುಕೊಂಡಿದ್ದರು. ಆ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವರಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ನಾಲ್ವರಲ್ಲಿ ಮೂವರು ಹಾಸನ ಜಿಲ್ಲೆಯ ಅರಕಲಗೂಡಿನವರು, ಓರ್ವರು ಬೆಂಗಳೂರಿನವರು. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದ್ದಾರೆ.
“ಘಟನೆಯ ಬಗ್ಗೆ ಮೃತಪಟ್ಟವರ ಕುಟುಂಬಕ್ಕೆ ಮಾಹಿತಿ ನೀಡಿದ್ದೇವೆ. ಘಟನೆ ಮುಂಜಾನೆ ನಡೆದಿದ್ದರಿಂದ ಈ ಸಂದರ್ಭ ಮಂಜು ಇತ್ತು. ಆದರೂ ಈ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ.