ಹುಬ್ಬಳ್ಳಿಯ ವರೂರ ಎಜೆಎಂ ಆರ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಮಂಗಳವಾರ (ಡಿಸೆಂಬರ್ 5) ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಏಕೀಕರಣ ರೂವಾರಿ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಏರ್ಪಡಿಸಿತ್ತು.
ವರೂರ ಕ್ಷೇತ್ರದ ಜೈನ ಮುನಿ ಗುಣಧರ ನಂದಿ ಮಾತನಾಡಿ, ಸ್ವಾತಂತ್ರ್ಯ ನಂತರ ಭಾಷಾವಾರು ರಾಜ್ಯಗಳ ಉದಯಕ್ಕಾಗಿ ಇಡೀ ದೇಶಾದ್ಯಂತ ಹೋರಾಟ ನಡೆದಿದ್ದ ಸಂದರ್ಭದಲ್ಲಿ, ಶಂಕರಗೌಡರು ತಮ್ಮ ಅದರಗುಂಚಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಸತತ 23ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಇದರ ಪರಿಣಾಮ, ಮೈಸೂರು ರಾಜ್ಯ ಭಾಷಾವಾರು ರಾಜ್ಯಗಳ ಉದಯವಾಯಿತು. ಆದ್ಧರಿಂದ ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಶಂಕರಗೌಡರ ಹೋರಾಟ ಅವಿಸ್ಮರಣೀಯ. ಆದರೆ ಕೇಂದ್ರ ಸರ್ಕಾರ ಭಾಷಾವಾರು ರಚನೆಗೆ ಹಿಂದೇಟು ಹಾಕಿತ್ತು ಎಂದರು.
ಗದಿಗಯ್ಯ ಹಿರೇಮಠ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟು ಹೋರಾಡಿದ ಹುಬ್ಬಳ್ಳಿಯ ಗಾಂಧಿ ಎಂದೇ ಖ್ಯಾತರಾದವರು. ಈ ನಾಡು ಕಂಡ ಅಪರೂಪದ ವ್ಯಕ್ತಿ ಶಂಕರಗೌಡರನ್ನು ನಾವು ಮರೆತಿರುವುದು ದುರಂತ ಎಂದರು.
ಕಾರ್ಯಕ್ರಮದಲ್ಲಿ ನಿಂಗನಗೌಡ ಮರಿಗೌಡರ, ದೇವೇಂದ್ರಪ್ಪ ಕಾಗೆನವರ್, ಭಗವಂತಪ್ಪ ವೆಂಕಣ್ಣವರ್, ಚಂದ್ರಪ್ಪ ಬೆಣ್ಣೆ, ನಾಗನಗೌಡ ಸಿದ್ದನಗೌಡ, ಚಂದ್ರಕಾಂತ್ ಮಿಸ್ಕಿನ್, ಗಂಗಾಂಬಿಕಾ, ದತ್ತಿ ದಾನಿ ಡಾ. ರಾಮು ಮೂಲಗಿ, ಪ್ರೊ. ಬಸವರಾಜ್ ಉಪಸ್ಥಿತರಿದ್ದರು.