ಪ್ರಯಾಣಿಕರ ಕೊರತೆ ಕಾರಣಕ್ಕೆ ರದ್ದುಪಡಿಸಲಾಗಿದ್ದ ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನ.30ರಿಂದ ಪುನಃ ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (07339/07340) ರೈಲನ್ನು ನ.30ರಿಂದ 2024ರ ಫೆಬ್ರುವರಿ 29ರವರೆಗೆ ಹುಬ್ಬಳ್ಳಿಯಿಂದ ಮತ್ತು ನ.30ರಿಂದ 2024ರ ಮಾರ್ಚ್ 1ರವರೆಗೆ ಬೆಂಗಳೂರಿನಿಂದ ಸಂಚರಿಸಲಿದೆ. ರೈಲು ಸಂಚಾರದ ಸಮಯ, ನಿಲುಗಡೆ ಮತ್ತು ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪ್ರಯಾಣಿಕರ ಕೊರತೆ ಕಾರಣ ನೀಡಿ ನ.20ರಿಂದ ರೈಲು ಸಂಚಾರ ರದ್ದುಪಡಿಸಲಾಗಿತ್ತು. ರೈಲು ಸಂಚಾರ ರದ್ದುಪಡಿಸಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಒತ್ತಡಕ್ಕೆ ಮಣಿದು ರೈಲು ಸಂಚಾರ ಆರಂಭಿಸಲಾಗಿದೆ ಎನ್ನುತ್ತಿದ್ದಾರೆ ಪ್ರಯಾಣಿಕರು.