ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ದಶಕಗಳಷ್ಟು ಹಳೆಯದಾದ ಕಸದ ರಾಶಿಗಳಿದ್ದು, ಸಾಕಷ್ಟು ಸಮಸ್ಯೆಗಳನ್ನು ಸೃಷ್ಠಿಸುತ್ತಿವೆ. ಇದೀಗ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.
ಕಸದ ರಾಶಿಯ ಸುತ್ತ ಹಗಲಿರುಳು ವೈಜ್ಞಾನಿಕ ವಿಧಾನದಿಂದ ನೀರನ್ನು ಬಳಸಿ ತೇವಾಂಶ ಕಾಪಾಡಿಕೊಳ್ಳಲು ಮುಂದಾಗಿದೆ. ಇದರಿಂದ ಕಸದಲ್ಲಿ ಉತ್ಪತ್ತಿಯಾಗುವ ಎಥೆನಾಲ್ ಅನಿಲದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂಬುದು ಪಾಲಿಕೆಯ ಅಭಿಪ್ರಾಯ. ಹುಬ್ಬಳ್ಳಿಯ 10ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ರಾತ್ರಿ ವೇಳೆ ದಟ್ಟ ಹೊಗೆ ಹೊರಸೂಸುವುದರಿಂದ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.
ಸಿಮ್ಲಾ ನಗರ, ಅಯೋಧ್ಯಾ ನಗರ, ಘೋಡ್ಕೆ ಪ್ಲಾಟ್, ವಿಶಾಲ ನಗರ, ಸುಭಾಷ್ ನಗರ, ಸಿದ್ಧಾರೂಢ ಮಠ, ಕೆಂಪಗೇರಿ, ನೇಕಾರ ನಗರ, ಅಜ್ಮೀರ್ ನಗರ, ಬೇಪಾರಿ ಪ್ಲಾಟ್, ನೂರಾನಿ ಪ್ಲಾಟ್, ಜವಲು ಪ್ಲಾಟ್, ಈಶ್ವರ ನಗರ, ಅಲ್ತಾಫ್ ಪ್ಲಾಟ್, ಮೆಹೆಬೂದ್ ನಗರ, ಜಂಗ್ಲಿ ಪೇಠ ನಿವಾಸಿಗಳು. ಇಸ್ಲಾಂಪುರ, ಇಬ್ರಾಹಿಂಪುರ, ಯುಕೆಟಿ ಬೆಟ್ಟ, ಆನಂದನಗರ, ನೇಕಾರ ನಗರ, ಗುಡಿಹಾಳ್ ರಸ್ತೆ ಸೇರಿದಂತೆ ಹಲವು ಜನವಸತಿ ಪ್ರದೇಶಗಳಿಂದ ಹೊಗೆ ಮತ್ತು ದುರ್ವಾಸನೆಯಿಂದ ತೀವ್ರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿವೆ.
ಹುಬ್ಬಳ್ಳಿಯಲ್ಲಿನ ಕಸ ಸಂಗ್ರಹ 19 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಸಂಜೆಯ ಸಮಯದಲ್ಲಿ ಈ ಕಸದಿಂದ ಸೂಸುವ ಹೊಗೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಹೊಗೆಯಿಂದ ಮಕ್ಕಳು, ವೃದ್ಧರು ಹಾಗೂ ಇತರರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದು ಈ ಪ್ರದೇಶದ ಸುತ್ತ ಮುತ್ತಲಿನ ಜನ ಪ್ರತಿಭಟಿಸಿದ್ದರು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದ ಪಾಲಿಕೆ, ಕಸದಿಂದ ಉತ್ಪತ್ತಿಯಾಗುವ ಎಥೆನಾಲ್ ಅನಿಲದಿಂದ ಬೆಂಕಿ ಹೊತ್ತಿಕೊಳ್ಳುವ ಘಟನೆಗಳನ್ನು ನಿಯಂತ್ರಿಸಲು, ತಜ್ಞರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಹುಬ್ಬಳ್ಳಿಯ ಕಸದ ಡಂಪ್ ಯಾರ್ಡ್‌ನಲ್ಲಿ ಎಚ್‌ಡಿಎಂಸಿ ಅಧಿಕಾರಿಗಳು ಮಣ್ಣಿನ ಟ್ಯಾಪಿಂಗ್, ರಿಂಗ್ ಪೈಪ್‌ಲೈನ್, ಟ್ರೆಂಚ್‌ಗಳು ಹಾಗೂ ಇತರ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಇಲ್ಲಿ ಐದು ಬೋರ್‌ವೆಲ್‌ಗಳಿದ್ದು, ಹನಿ ನೀರಾವರಿ ಮೂಲಕ ಹಗಲಿರುಳು ನೀರು ಹರಿಸಲು ಯೋಜಿಸಲಾಗಿದೆ.
ಈ ಯೋಜನೆಯನ್ನು ಒಂದೆರಡು ತಿಂಗಳ ಹಿಂದೆ ಜಾರಿಗೆ ತರಲಾಗಿದೆ. ಬೆಂಕಿ ಅವಘಡ ಮತ್ತು ದಟ್ಟ ಹೊಗೆಯ ತೀವ್ರತೆ ಕಡಿಮೆಯಾಗಿದೆ. ತೇವಾಂಶದ ಕಾರಣದಿಂದ ವಾಸನೆ ಹೋಗಲಾಡಿಸುವುದು ಕಷ್ಟವಾಗಿದ್ದು ಕ್ರಮೇಣ ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವು ಎನ್ನುತ್ತದೆ ಪಾಲಿಕೆ.