ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ತಿದ್ದುಪಡಿ ಪ್ರಸ್ತಾಪಕ್ಕೆ ನಾಡಿನ ಬಹುತೇಕ ಎಲ್ಲಾ ಜಿಲ್ಲೆ ಮತ್ತು ಗಡಿನಾಡ ಕಸಾಪ ಅಧ್ಯಕ್ಷರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ತಿದ್ದುಪಡಿಯು ಪರಿಷತ್ತಿನ ಪ್ರಜಾಸತ್ತಾತ್ಮಕ ನಿರ್ವಹಣೆಯನ್ನು ಕೇಂದ್ರೀಕರಣಗೊಳಿಸಲು ಕಾರಣವಾಗುತ್ತದೆಯೆಂಬ ಆತಂಕ ವ್ಯಕ್ತಪಡಿಸಿರುವ ಮಂಡ್ಯ ಜಿಲ್ಲೆಯ ಸಾಹಿತ್ಯಾಸಕ್ತರು, ತಿದ್ದುಪಡಿಯನ್ನು ತಡೆಗಟ್ಟುವಂತೆ ಕೇಂದ್ರ ಕಸಾಪ ಅಧ್ಯಕ್ಷರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಅಂಕಣಕಾರ ಬಿ.ಚಂದ್ರೇಗೌಡ, ಚಿತ್ರಕೂಟದ ಭಗವಾನ್ ಚಕ್ರವರ್ತಿ, ಸಂತೋಷ್ ಜಿ., ಸತೀಶ್ ಜವರೇಗೌಡ, ಮತ್ತು ಅರವಿಂದ ಪ್ರಭು ಅವರನ್ನೊಳಗೊಂಡ ನಿಯೋಗವು ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು ಮೂಲಕ ಕೇಂದ್ರ ಕಸಾಪ ಅಧ್ಯಕ್ಷರಿಗೆ ಸೋಮವಾರ ಈ ಕುರಿತು ಮನವಿ ಪತ್ರ ಸಲ್ಲಿಸಿತು.
ಬಳಿಕ ಮಾತನಾಡಿದ ನಿಯೋಗದ ಸದಸ್ಯರು, ನಿಬಂಧನೆ ತಿದ್ದುಪಡಿ ಕರಡು ಪ್ರಸ್ತಾಪವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಚುನಾಯಿತ ಜಿಲ್ಲೆ ಮತ್ತು ಗಡಿನಾಡ ಅಧ್ಯಕ್ಷರಲ್ಲಿ ತೀವ್ರ ಆಘಾತ ಮತ್ತು ಆತಂಕ ಉಂಟಾಗಿದೆ. ತಿದ್ದುಪಡಿ ಬಹುತೇಕವಾಗಿ ಪರಿಷತ್ತಿನ ಅಧಿಕಾರವನ್ನು ವಿಕೇಂದ್ರೀಕರಣಗೊಳ್ಳಲು ಅವಕಾಶ ನೀಡದೇ, ಕೇಂದ್ರೀಕರಣದ ಮೂಲಕ ಏಕವ್ಯಕ್ತಿ ಆಡಳಿತದ ರೂಪದಲ್ಲಿ ಪರಿಷತ್ತು ನಡೆಸಲು ತದ್ವಿರುದ್ಧ ಚಿಂತನೆಗಳನ್ನು ಹೊಂದಿದೆ ಎಂದು ಆರೋಪಿಸಿದರು.
ಈ ತಿದ್ದುಪಡಿಯು ಜಿಲ್ಲೆ ಮತ್ತು ಗಡಿನಾಡ ಅಧ್ಯಕ್ಷರ ಪ್ರಸ್ತುತ ಇರುವ ಹಕ್ಕುಗಳನ್ನು ಕಸಿದುಕೊಂಡು, ಪರಿಷತ್ತಿನ ಎಲ್ಲಾ ನಿರ್ಧಾರಗಳನ್ನು ಕೇವಲ ಕೇಂದ್ರ ಅಧ್ಯಕ್ಷರಿಗೇ ನೀಡಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಜಾಸತ್ತಾತ್ಮಕ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2021 ಡಿಸೆಂಬರ್ 4 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಚುನಾವಣಾಧಿಕಾರರು ನೀಡಿದ ಸಲಹೆಗಳ ಮೇರೆಗೆ ಪರಿಷತ್ತಿನ ಚುನಾವಣೆ ಸುಗಮವಾಗಿ ನಡೆಸಲು ತಿದ್ದುಪಡಿ ಮಾಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಪ್ರಸ್ತುತ ಪ್ರಸ್ತಾಪಿಸಲಾದ ತಿದ್ದುಪಡಿಯು ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಕೈಬಿಟ್ಟಿದ್ದು, ಅಧಿಕಾರ ಕೇಂದ್ರೀಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಮಾತ್ರ ಒಳಗೊಂಡಿದೆ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದು ಭಾರತೀಯ ಸಂಘ ಸಂಸ್ಥೆಗಳ ನಿಯಮಾವಳಿಗೆ ವಿರುದ್ಧವಾಗಿದೆ. ನಿಬಂಧನೆ ತಿದ್ದುಪಡಿ ಸಲಹಾ ಸಮಿತಿಯ ವರದಿ ಈ ಹಿಂದೆ ಚರ್ಚೆಗೆ ಬಾರದಿರುವ ಇತರ ಅಂಶಗಳನ್ನು ಅವಲೋಕಿಸುವ ಮುನ್ನವೇ ಹೊರಬಿದ್ದಿರುವುದು ಪ್ರಶ್ನಾರ್ಹ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ಚುನಾಯಿತ ಜಿಲ್ಲಾ ಮತ್ತು ಗಡಿನಾಡ ಅಧ್ಯಕ್ಷರ ಹಕ್ಕುಗಳನ್ನು ಕಿತ್ತುಕೊಳ್ಳುವ ಹಾಗೂ ಪರಿಷತ್ತಿನ ಆಡಳಿತದ ಪ್ರಜಾಸತ್ತಾತ್ಮಕತೆಯನ್ನು ಧ್ವಂಸ ಮಾಡುವ ಪ್ರಸ್ತಾಪಿತ ತಿದ್ದುಪಡಿ ತಿರಸ್ಕರಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಒತ್ತಾಯಿಸಿದ್ದಾರೆ.
