“ಒಳಮೀಸಲಾತಿ ಜಾರಿಯಾಗುವ ವಿಶ್ವಾಸ ಇದೆ. ನಾವು ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನ ನೀಡಬೇಕು. ಐಎಎಸ್ ಆಫೀಸರ್ ಟೀಂ, ಲಾಯರ್ ಟೀಂ, ಹೋರಾಟಗಾರರ ಟೀಂ, ಸಾಹಿತಿ, ಬುದ್ಧಿಜೀವಿಗಳ ಟೀಂ ಸೇರಿದಂತೆ ಒಂದು ವೇದಿಕೆಯನ್ನ ಸಿದ್ಧ ಮಾಡಿ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಸಲಹೆ ನೀಡೋಣ” ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಗುರುಮೂರ್ತಿ ಹೇಳಿದರು.
ಒಳಮೀಸಲಾತಿ ಚಳವಳಿ ಮುಂದಿನ ಹಂತದ ಹೋರಾಟದ ಬಗ್ಗೆ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಬುಧವಾರ ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಸಮಾಲೋಚನಾ ಸಭೆಯನ್ನ ಆಯೋಜನೆ ಮಾಡಿತ್ತು.
ಈ ವೇಳೆ ಮಾತನಾಡಿದ ಅವರು, “ಚಳವಳಿ ಎಂದರೆ ನನಗೇನು ಸಿಗುತ್ತದೆ. ಅಂದರಿಂದ ನನಗೆ ಏನು ಲಾಭ ಆಗುತ್ತದೆ ಎನ್ನುವುದರ ಬದಲಾಗಿ ಚಳವಳಿಗೆ ನಾನು ಏನು ಕೊಡಬಲ್ಲೇ ಅನ್ನೋದು ಮುಖ್ಯವಾಗುತ್ತದೆ. ಕಳೆದ 30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಮುಂದೆ ಬರಬೇಕು ಎಂದು ಅಂಬೇಡ್ಕರ್ ಅವರು ಮೀಸಲಾತಿ ಜಾರಿಗೆ ತಂದರು. ಸಂವಿಧಾನದಲ್ಲಿ ಎಲ್ಲ ಸೌಲಭ್ಯಗಳನ್ನ ನೀಡಿದರು. ಅದರೊಳಗೆ ಅನೇಕ ಜಾತಿಗಳನ್ನ ಸೇರಿಸಿದರು. 101 ಜಾತಿಗಳಲ್ಲಿ 15% ಮೀಸಲಾತಿ ಇದೆ. ನಾಗಮೋಹನದಾಸ್ ವರದಿ ಆಧಾರದ ಮೇಲೆ 2 % ಜಾಸ್ತಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅಲ್ಲಿಗೆ 17% ಮೀಸಲಾತಿ ಆಯಿತು. ಈ 17% ಮೀಸಲಾತಿಯನ್ನ ಬಲಾಡ್ಯ ಜಾತಿಗಳು ಕಬಳಿಸುತ್ತಿವೆ” ಎಂದರು.
“ದುರ್ಬಲ ಜಾತಿಗಳ ಮೀಸಲಾತಿಯನ್ನ ಬಲಾಡ್ಯ ಜಾತಿಗಳು ಕಬಳಿಸುತ್ತಿವೆ. ಹೀಗಾಗಿ, ಎಲ್ಲರಿಗೂ ಸಮಾನವಾದ ಮೀಸಲಾತಿ ಸಿಗಬೇಕು ಎಂದು ಕೃಷ್ಣಪ್ಪ ಅವರು ಮೀಸಲಾತಿ ಬಗ್ಗೆ ಧ್ವನಿ ಎತ್ತುತ್ತಾರೆ. ಹೋರಾಟ ಮಾಡುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಅವರು ನಮ್ಮನ್ನ ಅಗಲುತ್ತಾರೆ” ಎಂದು ನೆನೆದರು.
“ನಾಗಮೋಹನ್ ದಾಸ್ ಅವರು ನಾಳೆಯೇ ವರದಿ ಜಾರಿ ಮಾಡಿದರೆ, ನಾಳೇಯೇ ಒಳಮೀಸಲಾತಿ ಜಾರಿ ಮಾಡುತ್ತೀನಿ. ಈಗಾಗಲೇ, ನಾಗಮೋಹನ್ ದಾಸ್ ಅವರು ಮಧ್ಯಂತರ ವರದಿಯನ್ನ ಜಾರಿ ಮಾಡುತ್ತಾರೆ. ಅವರು ಜಾರಿ ಮಾಡಿದ ಬಳಿಕ ಒಳಮೀಸಲಾತಿ ಜಾರಿ ಮಾಡುತ್ತೇವೆ. ಈ ವಿಚಾರವಾಗಿ 30 ವರ್ಷಗಳ ಕಾಲ ಹೋರಾಟ ಮಾಡಿದ್ಧ ನೀವು ಒಂದು ಮೂರು ತಿಂಗಳು ಕಾಯೋಕೆ ಆಗಲ್ವಾ ಎಂದು ಸಿಎಂ ಸಭೆಯಲ್ಲಿ ಕೇಳಿದ್ದರು” ಎಂದು ಹೇಳಿದರು.
“ನಮ್ಮ ಹೋರಾಟ ಆರೋಗ್ಯಕರವಾಗಿರಬೇಕು. ಕೆ.ಎಚ್.ಮುನಿಯಪ್ಪ ಅವರು ಚೀಫ್ ಮಿನಿಸ್ಟರ್ ವರದಿ ಜಾರಿ ಮಾಡುವುದಕ್ಕೆ, ಮುನಿಯಪ್ಪ ಮತ್ತು ತಿಮ್ಮಾಪೂರ ಅವರನ್ನ ಟಾರ್ಗೆಟ್ ಮಾಡಿದರೆ ಹೇಗೆ? ಹೋರಾಟಗಳು ಸಮಾಜಕ್ಕೆ ಉತ್ತಮ ಮಾರ್ಗ ನೀಡಬೇಕು. ಕೆ.ಎಚ್.ಮುನಿಯಪ್ಪ ಅವರು ಸಿಎಂ ಆಗುತ್ತೀನಿ ಅಂದರೆ, ಅದಿಕ್ಕೆ ನಾವು ಸಪೋರ್ಟ್ ಮಾಡುತ್ತೇವೆ. ಇಲ್ಲಿಯವರೆಗೂ ಸರ್ಕಾರದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಿಲ್ಲ. ನಾವು ಕೆ.ಎಚ್.ಮುನಿಯಪ್ಪ ಅವರನ್ನ ಸಿಎಂ ಮಾಡಿ ಎಂದು ಧ್ವನಿ ಎತ್ತಬೇಕು” ಎಂದು ತಿಳಿಸಿದರು.
ನಿಯೋಗದ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, “ನಮ್ಮ ಒತ್ತಾಯಗಳು ಯಾರ ವಿರುದ್ದವೂ ಅಲ್ಲ. ಒಳಮೀಸಲಾತಿ ಬೇಕು ಎಂಬುದಷ್ಟೇ ನಮ್ಮ ವಾದ. 2000 ವರ್ಷಗಳ ಕಾಲ ವಿದ್ಯೆ ಕಲಿಯುವುದಕ್ಕೆ ಬ್ರಾಹ್ಮಣ ರಿಗೆ ಮಾತ್ರ ಮೀಸಲಾತಿ ಇತ್ತು. ಬುಡಕಟ್ಟು ಜನಾಂಗದ ಪರವಾಗಿ ಮೊದಲ ಬಾರಿಗೆ ಧ್ವನಿ ಎತ್ತಿದ್ದು ಭಗವಾನ್ ಬುದ್ದ. ಮೀಸಲಾತಿ ಎಂದರೆ ಬರೀ ಎಸ್ ಸಿ /ಎಸ್ ಟಿ ಅಲ್ಲ.1950 ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಭಾರತ ಸಂವಿಧಾನ ಆಶಯ ಜಾತಿಯತೇ ನಿಲ್ಲಬೇಕು. ಎಲ್ಲ ಜನಕ್ಕೂ ಭೂಮಿ, ನೀರು ಬೇಕು. ಮೀಸಲಾತಿಯಲ್ಲಿ ಎಲ್ಲ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬುದಾಗಿದೆ. ಮಹಿಳೆಯರು, ಪುರುಷರು ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬುದು ಸಂವಿಧಾನದ ಆಶಯ. ಯಾವ ಯಾವ ಸಮುದಾಯಗಳಿಗೆ ಎಷ್ಟು ಮೀಸಲಾತಿ ಸಿಗಬೇಕಿತ್ತು. ಸದ್ಯ ಅಷ್ಟು ಮೀಸಲಾತಿ ಸಿಕ್ಕಿಲ್ಲ. ವಿದ್ಯಾಭ್ಯಾಸ ಸಿಗಬೇಕು. ಭೂಮಿಸಿಗಬೇಕು. ಈ ದೇಶದ ಸಂಪತ್ತನ್ನ ಸರಿಸಮಾನವಾಗಿ ಹಂಚಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆಯಲ್ಲಿ ಸಿಲಿಂಡರ್ ಸ್ಫೋಟ; ದಂಪತಿಗಳ ಸ್ಥಿತಿ ಗಂಭೀರ
“ನಮ್ಮಒಗ್ಗಟ್ಟು ಗಟ್ಟಿಯಾದರೆ, ಒಳಮೀಸಲಾತಿ ಜಾರಿಯಾಗಲೇಬೇಕು. ಒಳಮೀಸಲಾತಿ ವಿಚಾರ ಬಂದಾಗ ದಳ, ಬಿಜೆಪಿ, ಕಾಂಗ್ರೆಸ್ ಇವರೆಲ್ಲರೂ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೀವಿ ಎಂದು ಹೇಳಿದ್ದರು. ಆದರೆ, ಇನ್ನು ಕೂಡ ಒಳಮೀಸಲಾತಿ ಜಾರಿ ಮಾಡಿಲ್ಲ. ಈಗ ಎಲ್ಲ ಕಡೆಯೂ ಚಳವಳಿ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರ ಮೇಲೆ ನಮಗೆಲ್ಲರಿಗೂ ಬಹಳ ಗೌರವ ಇದೆ. ಮುಂದೇನೂ ಇರುತ್ತದೆ. ಆದರೆ, ಎಸ್‌ಸಿಪಿ/ಟಿಎಸ್‌ಪಿ ಹಣವನ್ನ ಬೇರೆ ವಿಚಾರಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. 25 ಸಾವಿರ ಕೋಟಿ ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಹೀಗೆ ಮಾಡಿದರ ಏನು ನಿಮ್ಮ ಸಿದ್ದಾಂತ, ಏನು ನಿಮ್ಮ ವಿಚಾರ. ಈ ವಿಚಾರದ ಬಗ್ಗೆ ಯಾರೂ ಯಾವ ಸಚಿವರು ಶಾಸಕರು ಮಾತಾಡುತ್ತಿಲ್ಲ. ನಮ್ಮನ್ನ ವಿರೋಧ ಮಾಡಿದರೆ, ಮುಂದಿನ ಚುನಾವಣೆಗಳಲ್ಲಿ ನಿಮ್ಮ ಸೋಲಿಸಿ ನಮ್ಮಶಕ್ತಿ ಏನೆಂದು ತೋರಿಸುತ್ತೀವಿ” ಎಂದು ಹೇಳಿದರು.
ಒಳಮೀಸಲಾತಿ ಹೋರಾಟಗಾರ ವೈ ಸಿ ಕಾಂಬ್ಳೆ ಮಾತನಾಡಿ, “ಎಡಗೈ ಸಮುದಾಯದಲ್ಲಿ ಮಾದಿಗ ಸಮುದಾಯ ಅತ್ಯಂತ ವಂಚನೆಗೆ ಒಳಗಾಗಿರುವ ಸಮುದಾಯ. ಎಡಗೈ ಸಮುದಾಯದಲ್ಲಿ 40 ಲಕ್ಷ ಜನ ಇದ್ದೇವೆ. ಎಂದರೆ, ಸದಾಶಿವ ಆಯೋಗದ ವರದಿ ಪ್ರಕಾರ ¼ ಇದ್ದೀವಿ. ಮಾದಿಗರನ್ನ ಹೊರತು ಪಡಿಸಿ ಸಮಗಾರ, ಮಚಗಾರ, ಡೋಹರ್ ನಮಗೆ ಬೇರೆ ಮೀಸಲಾತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಸಮುದಾಯಗಳಿಗೆ ನ್ಯಾಯ ಸಿಗಬೇಕು. ರಾಜಕೀಯವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಈ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಈ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕು” ಎಂದರು.
ಸಚಿವ ಕೆ, ಎಚ್. ಮುನಿಯಪ್ಪ ಮಾತನಾಡಿ, “ಒಳಮೀಸಲಾತಿ ಜಾರಿಗೆ ಸಲಹೆ ನೀಡಿ, ಮಾರ್ಗದರ್ಶನ ನೀಡಿ” ಎಂದು ಮನವಿ ಮಾಡಿದರು.