ಇದ್ರೀಸ್ ಪಾಷಾ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ಸರಕಾರದಿಂದ ನೀಡಿರುವುದಕ್ಕೆ, ಇದ್ರೀಸ್ ಪಾಷಾ ಹತ್ಯೆಯ ಪ್ರಮುಖ ಆರೋಪಿ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಯಬಿಟ್ಟಿರುವ ವಿಡಿಯೋ ವೈರಲ್ ಆಗಿದೆ.
ಆರು ನಿಮಿಷ ಮಾತನಾಡಿರುವ ವಿಡಿಯೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಆರೋಪಿ ಪುನೀತ್ ಕೆರೆಹಳ್ಳಿ “ನಮ್ಮ ತೆರಿಗೆ ಹಣವನ್ನು ಯಾವ ಆಧಾರದಲ್ಲಿ, ಯಾವ ಕಾರಣಕ್ಕೆ ಇದ್ರೀಸ್ ಕುಟುಂಬಕ್ಕೆ ಕೊಟ್ರಿ? ನ್ಯಾಯಾಲಯ ಕೊಲೆ ಎಂದು ತೀರ್ಮಾನಿಸುವ ಮುನ್ನ ನೀವೇಕೆ 25 ಲಕ್ಷ ಕೊಟ್ರಿ? ನೀವು ಪ್ರಚೋದನೆ ಮಾಡುತ್ತಿದ್ದೀರಾ?” ಎಂದು ಸಿಎಂಗೆ ಪ್ರಶ್ನಿಸಿದ್ದಾನೆ.
“ಅಕ್ರಮವಾಗಿ 17 ಜಾನುವಾರು ಸಾಗಾಟ ಮಾಡಿದ್ದು ಅಕ್ರಮ ಅಲ್ವ? ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿಯಾಗಿ ಏನು ಮಾಡ್ತಿದ್ದೀರಾ? ಯಾಕೆ ಗೋರಕ್ಷಕರ ಹೊಟ್ಟೆ ಉರಿಸ್ತಿದ್ದೀರಾ? ಯಾಕೆ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ? ಯಾವ ಅಧಿಕಾರ ಇದೆ ಎಂದು ನಮ್ಮ ಮೇಲೆ ನೀವು ಈ ರೀತಿ ಮಾಡ್ತಿದ್ದೀರಾ?” ಎಂದು ಕಿಡಿಕಾರಿದ್ದಾರೆ.
“ನಮ್ಮನ್ನು ಜೈಲಿಗೆ ಹಾಕಿದ್ದೀರಾ, ನಾಳೆ ನಿರಪರಾಧಿ ಎಂದು ಸಾಬೀತಾದರೆ 25 ಲಕ್ಷ ರೂಪಾಯಿ ನಮಗೆ ಕೊಡ್ತೀರಾ? ಯಾವ ಆಧಾರದಲ್ಲಿ ಅವರಿಗೆ ಹಣ ಕೊಟ್ರಿ? ಯಾರ ಅಪ್ಪನ ಮನೆಯಿಂದ ಹಣ ಕೊಟ್ರಿ? ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಗೋ ಹತ್ಯೆಗೆ ಪ್ರಚೋದನೆ ಕೊಡ್ತಿದ್ದೀರಾ?” ಎಂದು ವಾಗ್ದಾಳಿ ನಡೆಸಿದ್ದಾನೆ.
“ಕಾನೂನು ಮೀರಿದವರಿಗೆ ಹಣ ಕೊಡ್ತಿದ್ದೀರಿ, ನಿಮಗೆ ಗೋಮಾತೆ ಕ್ಷಮಿಸುವುದಿಲ್ಲ, ಗೋ ಮಾತೆ ನಿಮಗೆ ಶಿಕ್ಷೆ ಕೊಡ್ತಾಳೆ” ಎನ್ನವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಗೃಹಜ್ಯೋತಿ ಯೋಜನೆ; ರಾತ್ರಿ ವೇಳೆ ಸರ್ವರ್ ಸಕ್ರಿಯ