ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿದೆ. ರೇಡಿಯೋ ಡಯಾಗ್ನೋಸಿಸ್ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಅಕ್ರಮವಾಗಿ ಸೀಟು ಕಾಯ್ದಿರಿಸುವುದು ಮತ್ತು ಕಾನೂನು ಬಾಹಿರವಾಗಿ ಡಾ.ಸುನೀಲ್ ಕುಮಾರ್ ಎಂಬುವರಿಗೆ ಸೀಟು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ.
ಕೆಇಎ ಸೀಟು ಹಂಚಿಕೆಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿ ಹಾಸನ ಜಿಲ್ಲೆಯ ಡಾ. ಸಿ.ಕೆ ರಜನಿ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಮತ್ತು ಟಿ.ಜಿ ಶಿವಶಂಕರೇಗೌಡ ಅವರಿದ್ದ ನ್ಯಾಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಕೆಇಎ ಅಕ್ರಮ ಸಾಬೀತಾಗಿದ್ದು, ಕೆಇಎಗೆ ದಂಡ ವಿಧಿಸಿದೆ.
2023ರ ಸೆಪ್ಟೆಂಬರ್ 19ರಂದು ಕೌನ್ಸಿಲಿಂಗ್‌ನಿಂದ ಹಿಂದೆ ಸರಿಯಲು ಸುನೀಲ್ ಕುಮಾರ್‌ಗೆ ಅನುಮತಿ ನೀಡಿದ್ದ ಕೆಇಎ 2023ರ ಅಕ್ಟೋಬರ್ 6ರವರೆಗೂ ಸೀಟು ಲಭ್ಯವಿದೆ ಎಂದು ಹೇಳಿಕೊಂಡಿತ್ತು. ಅದೇ ದಿನ ಸುನೀಲ್ ಕುಮಾರ್‌ಗೆ ಸೀಟು ಹಂಚಿಕೆಯನ್ನೂ ಮಾಡಿತ್ತು. ಇದು, ಸುನೀಲ್ ಅವರಿಗೆ ಅಕ್ರಮವಾಗಿ ಸೀಟು ಹಂಚಿಕೆ ಮಾಡಿರುವುದನ್ನು ಸೂಚಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
“ರೇಡಿಯೋ ಡಯಾಗ್ನೋಸಿಸ್ನಲ್ಲಿ ಸೀಟು ಲಭ್ಯವಿಲ್ಲವೆಂದು ತೋರಿಸಿ, ಅರ್ಜಿದಾರರಿಗೆ ಇಷ್ಟವಿಲ್ಲದೇ ಇದ್ದರೂ, ಒತ್ತಾಯವಾಗಿ ಸ್ತ್ರೀರೋಗಶಾಸ್ತ್ರದಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವಂತೆ ಮಾಡಲಾಗಿದೆ” ಎಂಬುದನ್ನು ಪೀಠವು ಗಮನಿಸಿದೆ.
“ಅರ್ಜಿದಾರ ಡಾ. ಸಿ.ಕೆ ರಜನಿ ಅವರಿಗೆ ರೇಡಿಯೋ ಡಯಾಗ್ನೋಸಿಸ್ ಸೀಟನ್ನು ಮರು ಹಂಚಿಕೆ ಮಾಡಬೇಕು. ವೈದ್ಯಕೀಯ ಸ್ನಾತಕೋತ್ತರ ವಿಭಾಗದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಅರ್ಜಿದಾರರು ಪಾವತಿಸಿದ್ದ ಶುಲ್ಕವನ್ನು ಎಂ.ಆರ್ ವೈದ್ಯಕೀಯ ಕಾಲೇಜಿನ ರೇಡಿಯೋ ಡಯಾಗ್ನೋಸಿಸ್ ಸೀಟಿಗೆ ಸರಿಹೊಂದಿಸಬೇಕು. ಅಲ್ಲದೆ, ದಂಡದ ಮೊತ್ತದಲ್ಲಿ 2.5 ಲಕ್ಷ ರೂಪಾಯಿಯನ್ನು ರಜನಿ ಅವರಿಗೆ ನೀಡಬೇಕು. ಉಳಿದ ಹಣವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಸರಿನಲ್ಲಿ ಠೇವಣಿ ಇಡಬೇಕು” ಎಂದು ಕೋರ್ಟ್ ನಿರ್ದೇಶನ ನೀಡಿದೆ.