ಯಾವುದು ಭ್ರಮೆ, ಯಾವುದು ವಾಸ್ತವ ಎಂಬುದನ್ನು ಅರಿತುಕೊಳ್ಳುವುದು ಇಂದಿನ ದೊಡ್ಡ ಸವಾಲು ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರು ಹೇಳಿದರು. ಜಾಗೃತ ಕರ್ನಾಟಕ ಆಯೋಜಿಸಿದ್ದ “2014ರ ನಂತರದ ಭಾರತ- ಭ್ರಮೆ ಮತ್ತು ವಾಸ್ತವ” ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಮ್ಮ ದೇಶದಲ್ಲಿ ಜಿ-20 ಶೃಂಗಸಭೆ ನಡೆಯಿತು. ಅದು ಬಹುಕಾಲದಿಂದಲೂ ನಡೆಯುತ್ತಾ ಇತ್ತು. ಆದರೆ, ಅದರ ಬಗ್ಗೆ ವಿಪರೀತ ಕೇಳುತ್ತಾ ಇರಲಿಲ್ಲ. ಆದರೆ, ಇತ್ತೀಚೆಗೆ ನಾವು ಎಲ್ಲೆಡೆ ಕಾಣಲು ಶುರು ಮಾಡಿದೆವು. ರೈಲ್ವೇ ನಿಲ್ದಾಣ, ಬೀದಿ, ನಗರಗಳು ಎಲ್ಲೆಡೆ ಫ್ಲೆಕ್ಸ್‌ಗಳು ಕಾಣಿಸಿದವು. ಅದರ ಮೂಲಕ ಒಂದು ಭ್ರಮೆಗೆ ಬೇಕಾದ ತಳಹದಿಯನ್ನು ಸೃಷ್ಟಿಸಲಾಯಿತು. ಪ್ರಚಾರ, ಪ್ರೊಪಗಾಂಡದ ಮೂಲಕ ಜಿ-20ಯನ್ನು ಎಲ್ಲೆಡೆ ತಲುಪಿಸಲಾಯಿತು. ನನಗೆ ಅದರಿಂದ ಸಿಕ್ಕಿದ ಚಿತ್ರಣ ಏನೆಂದರೆ, ಪ್ರಪಂಚದ ಪ್ರಮುಖ ದೇಶಗಳಾದ ಅಮೆರಿಕ, ರಷ್ಯಾ, ಚೀನಾ, ಯುಕೆ, ಜಪಾನ್, ದಕ್ಷಿಣ ಅಮೆರಿಕದ ದೇಶಗಳೆಲ್ಲವೂ ಪ್ರಪಂಚದಲ್ಲಿ ಏನು ಮಾಡಬೇಕು ಎಂಬುದರ ಕುರಿತು ಯಾವ ಅರಿವನ್ನೂ ಹೊಂದಿರಲಿಲ್ಲ. ಅವರೆಲ್ಲರೂ ಭಾರತದ ಮುಂದೆ ಶರಣಾಗಿ ತಮಗೆ ದಾರಿ ತೋರಿಸೆಂದು ಕೇಳಿದರು. ಏಕೆಂದರೆ ಇದು ವಿಶ್ವಗುರು. ಹಾಗಾಗಿ ಇಡೀ ಪ್ರಪಂಚ ಇಲ್ಲಿಗೆ ಬಂದು ಭಾರತದಿಂದ ಕೆಲವು ವಿಚಾರವನ್ನು ಕಲಿತು ಹೋದವು. ಇದು ನನಗೆ ಜಿ-20 ಪ್ರಚಾರದಿಂದ ಗೊತ್ತಾಗಿದ್ದು” ಎಂದು ತಿಳಿಸಿದರು.
“ಜಿ-20ಯ ವಾಸ್ತವವೇನು? ಮೊನ್ನೆ ಇದು ಇಂಡಿಯಾ ಆಗಿತ್ತು. ನಿನ್ನೆ, ಇಂದೂ ಇಂಡಿಯಾವೇ ಆಗಿದೆ. ಜಿ-20ಯೂ ಹಿಂದೆಯೂ ಇತ್ತು. ಈಗಲೂ ಇದೆ. ಆದರೆ ಜಗತ್ತಿನ ಯಾವ ದೇಶವೂ ಇಲ್ಲಿ ಮಾಡಿದಷ್ಟು ಗಾನ, ನೃತ್ಯ ಮಾಡಲಿಲ್ಲ. ಆದರೆ, ಇಲ್ಲಿ ಮಾತ್ರ ಎಲ್ಲವೂ ನಡೆಯಿತು” ಎಂದು ವಿವರಿಸಿದರು.
“ಜಿ-20ಯ ಕೇಂದ್ರದ ಘೋಷಣೆ “ವಸುಧೈವ ಕುಟುಂಬಕಂ”. ಅದನ್ನು ಭಾರತವು ಪ್ರತಿನಿಧಿಸುವ ಮೌಲ್ಯವನ್ನಾಗಿ ಮುಂದಿಡಲಾಯಿತು. ಅದೇನು? ಅದೆಲ್ಲಿಂದ ಬಂತು ಎಂಬುದನ್ನು ಹುಡುಕಿದರೆ – ಅದು ಮಹೋಪನಿಷತ್ ಎಂಬ ಸಣ್ಣ ಉಪನಿಷತ್ತಿನಿಂದ ಬಂದಿದ್ದು. ಈಸೋಪನಿಷತ್ತಿನಂತಹ ಹಲವು ಪ್ರಮುಖ ಉಪನಿಷತ್ತಿನಿಂದ ಬಂದಿದ್ದಲ್ಲ. ಈ ದೇಶ, ಸರ್ಕಾರವು ಈ ಮೌಲ್ಯದ ಪರವಾಗಿ ನಿಲ್ಲುತ್ತದೆ ಎಂದು ಬಿಂಬಿಸಲಾಯಿತು. ಇಡೀ ಭುವಿಯೇ ಒಂದು ಕುಟುಂಬ ಎಂದು ಅದರ ಅರ್ಥ.
ಆ ಉಪನಿಷತ್ತು ಏನು ಹೇಳುತ್ತದೆ? ಅದು ಎರಡು ರೀತಿಯ ಮನಸ್ಸುಗಳನ್ನು ಕುರಿತಾಗಿ ಹೇಳುತ್ತದೆ.
ಸಂಕುಚಿತ ಮನಸ್ಸು – ಉದಾರ ಮನಸ್ಸು. ಯಾರು ಸಂಕುಚಿತ ಮನಸ್ಸು ಹೊಂದಿರುತ್ತಾರೋ ಅವರು ಕೆಲವರು ಮಾತ್ರ ತಮ್ಮವರೆಂದು ಭಾವಿಸುತ್ತಾರೆ. ಉದಾರ ಮನಸ್ಸು ಹೊಂದಿರುವವರು ಇಡೀ ಭುವಿಯನ್ನೇ ತಮ್ಮ ಕುಟುಂಬವೆಂದು ಭಾವಿಸುತ್ತಾರೆ. ಉದಾರ ಮನಸ್ಸು ಮತ್ತು ಸಂಕುಚಿತ ಮನಸ್ಸು ಎಂದರೇನೆಂದು ವಿವರಿಸುವ ಒಂದು ಶ್ಲೋಕ ಅದು. ಆದರೆ, ಇದು ಎಂತಹ ವೈರುಧ್ಯ ಅಂದರೆ – ಇವರು ಆ ಜನ ನಮ್ಮವರಲ್ಲ, ಆ ಧರ್ಮದವರು ನಮ್ಮವರಲ್ಲ, ಈ ಭಾಷೆಯವರು ನಮ್ಮನವರಲ್ಲ, ಆ ಪ್ರದೇಶ ನಮ್ಮದಲ್ಲ, ಈ ಭಾಷೆಯವರು ಮಾತ್ರ ನಮ್ಮವರು ಎಂದೆಲ್ಲಾ ಹೇಳುವವರು. ತಮ್ಮ ಸಿದ್ಧಾಂತದಲ್ಲಿ, ತಮ್ಮ ನೀತಿಯಲ್ಲಿ ತಮ್ಮ ಕಾರ್ಯಕ್ರಮಗಳಲ್ಲಿ ತಮ್ಮವರು ಮತ್ತು ಬೇರೆಯವರು ಎಂಬ ಬೇಧ ಉಂಟು ಮಾಡುವ ಈ ಸರ್ಕಾರವು ಇಂತಹ ದೊಡ್ಡ ಮೌಲ್ಯವನ್ನು ಜಿ-20ಯ ಸಂದರ್ಭದಲ್ಲಿ ಮುಂದಿಟ್ಟಿತು. ಇದೇ ಆ ವೈರುಧ್ಯ” ಎಂದು ವಿವರಿಸಿದರು.
ಹೆಚ್ಚು ನಿರುದ್ಯೋಗದ ದೇಶ ನಮ್ಮದು
“ಇಂದು ಭಾರತವು ಪ್ರಪಂಚದಲ್ಲೆ ಅತಿ ಹೆಚ್ಚು ಯುವ ನಿರುದ್ಯೋಗಿಗಳನ್ನು ಹೊಂದಿರುವ ದೇಶವಾಗಿದೆ. ಅದು 24%ಗೂ ಹೆಚ್ಚು. ಇರಾನ್, ಲೆಬನಾನ್, ಸಿರಿಯಾ ದೇಶಗಳಿಗಿಂತ ಇದು ಹೆಚ್ಚು. ನಮ್ಮ ನೆರೆಯ ದೇಶ ಬಾಂಗ್ಲಾದೇಶದ ನಿರುದ್ಯೋಗ ದರ 12%. ನಮ್ಮದರ ಅರ್ಧ ಎಂದು ವಿವರಿಸಿದರು.
“ನಮ್ಮ ಹಣದುಬ್ಬರದ ದರ ತಾಳಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ಏರಿದೆ ಎಂದು ಸರ್ಕಾರದ ಅಡಿಯಾಳಾಗಿರುವ ರಿಸರ್ವ್ ಬ್ಯಾಂಕ್ ಹೇಳುತ್ತದೆ. ನಮ್ಮ ಆಂತರಿಕ ಉಳಿತಾಯವು ಶೇ.5ಕ್ಕಿಂತ ಕಡಿಮೆ, ಹಿಂದೆಂದೂ ಇರದ್ದಕ್ಕಿಂತ ಕಡಿಮೆ. ನಮ್ಮ ಆಂತರಿಕ ಬಂಡವಾಳ ಹೂಡಿಕೆಯೂ ಅತ್ಯಂತ ಕಡಿಮೆ. ಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ 10-30%ರಷ್ಟಿದೆ. ಅವರು ಬಹಿರಂಗವಾಗಿ ಏನೇ ಹೇಳಿದರೂ, ನಮ್ಮ ಆರ್ಥಿಕತೆಯ ಮೇಲೆ ವಿಶ್ವಾಸ ಇಲ್ಲ ಎಂಬುದನ್ನಷ್ಟೇ ಇದು ತೋರಿಸುತ್ತದೆ. ದೇಶದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ವಿಶ್ವಾಸ ಇಲ್ಲದಿರುವುದನ್ನು ಬೆಟ್ಟು ಮಾಡಿ ತೋರಿಸುತ್ತದೆ” ಎಂದು ಹೇಳಿದರು.
“ಭಾರತದ ಪೌರತ್ವವನ್ನು ತೊರೆದು ಹೋಗುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. 2014ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅತಿ ಶ್ರೀಮಂತರು ಭಾರತದ ಪೌರತ್ವವನ್ನು ತೊರೆದಿದ್ದಾರೆ. ಆದರೆ, ಬಿಂಬಿಸಲಾಗುತ್ತಿರುವುದು ಏನು? ಭಾರತವು ಪ್ರಪಂಚದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. 5 ಟ್ರಿಲಿಯನ್ ಎಕಾನಮಿ, ಪ್ರಪಂಚದ ಮೂರನೇ, ಐದನೇ ದೊಡ್ಡ ಆರ್ಥಿಕತೆಯ ಕಡೆಗೆ ಇತ್ಯಾದಿ. ನಿರುದ್ಯೋಗ, ಉದ್ಯೋಗಶೀಲತೆಯ ಭಾಗವಹಿಸುವಿಕೆಯ ದರ, ಬಂಡವಾಳ ಪಲಾಯನ, HNIದೇಶ ಬಿಟ್ಟು ಹೋಗುತ್ತಿರುವುದು –ಇವೆಲ್ಲಾ ಒಂದು ಕಡೆಯಿದ್ದರೂ ಈ ಭ್ರಮೆಯನ್ನು ಮೂಡಿಸಲಾಗುತ್ತಿದೆ” ಎಂದು ಪರಕಾಲ ವಿವರಿಸಿದರು.
“2021ರ ಜನವರಿಯಲ್ಲಿ ಒಂದು ಸುದ್ದಿ ಹೊರಬಂತು. ಬಿಹಾರ ಮತ್ತು ಉ.ಪ್ರದೇಶದಲ್ಲಿ ಅಶಾಂತಿಯದ್ದು. ರೈಲೊಳಗೆ ದೊಡ್ಡ ಪ್ರಮಾಣದ ನಿರುದ್ಯೋಗಿ ಯುವಜನರು ನುಗ್ಗಿ ಗಲಾಟೆ ಮಾಡಿದರು. ಅವರು ಒಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು, (ರೈಲ್ವೇ ಇಲಾಖೆಯ ಉದ್ಯೋಗಗಳಿಗೆ – NTPC jobs) ಹೊರಟಿದ್ದರು. Non technical professional jobs ಅಂದರೆ ದೈಹಿಕ ಶ್ರಮ ಬೇಡುವ ಉದ್ಯೋಗಗಳಿಗೆ ಕೊಟ್ಟ ವರ್ಣರಂಜಿತ ಹೆಸರಷ್ಟೇ ಅದು. 35,000 ಹುದ್ದೆಗಳಿಗೆ 1 ಕೋಟಿ 25 ಲಕ್ಷ ಜನ ಸ್ಪರ್ಧಿಗಳು. ಇದು ವಾಸ್ತವ. ಭ್ರಮೆ ಏನು? ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಮೊದಲ ಐದು ಆರ್ಥಿಕತೆಯಲ್ಲಿ ಭಾರತವೂ ಒಂದು ಎಂದು ಬಿಂಬಿಸಲಾಗುತ್ತಿದೆ” ಎಂದು ತಿಳಿಸಿದರು.