ಮಂಡ್ಯದ ಆಲೆಮನೆ, ಹೆಲ್ತ್ ಕ್ವಾಟರ್ಸ್ ಬಳಿಕ ಇದೀಗ ತೋಟದ ಮನೆಗಳಲ್ಲೂ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಕೃತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣುಭ್ರೂಣ ಪತ್ತೆ ದಂಧೆ ನಡೆಯುತ್ತಿರುವ ಸಂದರ್ಭದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಗುರುವಾರ ತಡರಾತ್ರಿ ಡಿಹೆಚ್ಒ ಡಾ. ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯಲ್ಲಿ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷೀನ್ ಪತ್ತೆಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಹಾಸನ ಮೂಲದ ಗರ್ಭಿಣಿಯೂ ಇದ್ದರು. ಭ್ರೂಣಲಿಂಗ ಪತ್ತೆಗಾಗಿ ಗರ್ಭಿಣಿಯನ್ನು ಕರೆತರಲಾಗಿತ್ತು. ಗರ್ಭಿಣಿ ಮೂರನೇ ಹೆಣ್ಣುಭ್ರೂಣ ಅಬಾರ್ಷನ್ಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಿದ ಪೊಲೀಸರು, ಗರ್ಭಿಣಿಯ ಪತಿಯನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ. ಮನೆ ಮಾಲೀಕ ಧನಂಜಯ್ ಆರೋಗ್ಯ ಇಲಾಖೆಯ ಗ್ರೂಪ್ ಡಿ ಸಿಬ್ಬಂದಿ ಎನ್ನಲಾಗಿದೆ.
ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಪತ್ತೆ
ಮಂಡ್ಯ ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಪತ್ತೆ, ಹತ್ಯೆ ನಡೆಯುತ್ತಿರುವ ವಿಚಾರ ಕರ್ನಾಟಕದಾದ್ಯಂತ ಈಗಾಗಲೇ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ಕ್ವಾರ್ಟಸ್‌ನಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಸರಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು.
ಕಳೆದ 2023ರ ನವೆಂಬರ್‌ನಲ್ಲಿ ಮಂಡ್ಯ ತಾಲೂಕು ಹಾಡ್ಯ-ಹುಳ್ಳೇನಹಳ್ಳಿ ನಡುವಿನ ಆಲೆಮನೆಯೊಂದರ ಕೊಠಡಿಯಲ್ಲಿ ಅಕ್ರಮವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾರ್ಯ ನಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು. ಇಲ್ಲಿ ಭ್ರೂಣ ಲಿಂಗ ಪತ್ತೆ ಕಾರ್ಯದ ವೇಳೆ ಮಗು ಹೆಣ್ಣು ಎಂದು ಗೊತ್ತಾದ ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಕಾನೂನುಬಾಹಿರವಾಗಿ ಭ್ರೂಣ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣ ಬೆನ್ನು ಹತ್ತಿದ ಬೆಂಗಳೂರು ಪೊಲೀಸರು ಹತ್ತು ಜನರನ್ನು ಬಂಧಿಸಿದ್ದರು. ಜತೆಗೆ, ಒಬ್ಬ ಆಯುರ್ವೇದ ವೈದ್ಯ ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸಾಮಾಜೀಜ ಪಿಡುಗಾದ ಹೆಣ್ಣು ಭ್ರೂಣ ಹತ್ಯೆ ಚಟುವಟಿಕೆಯ ಆರೋಪದ ಹೊತ್ತಿದ್ದ ಮಂಡ್ಯ ಜಿಲ್ಲೆಯು ನಾಡಿನೆದುರು ತಲೆತಗ್ಗಿಸುವಂತಾಗಿತ್ತು.
“ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿರುವ ವೈದ್ಯರು ಮತ್ತು ವಂಚಕರಿಗೆ ಸುಲಭವಾಗಿ ಜಾಮೀನು ಸಿಗದಂತೆ ರಾಜ್ಯ ಸರ್ಕಾರ ಕಾನೂನನ್ನು ಬಲಪಡಿಸಲಿದೆ” ಎಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಅಲ್ಲಿಗೆ ಆ ವಿಚಾರ ಸಂಬಂಧಿತ ಚರ್ಚೆ ತಣ್ಣಗಾಗಿತ್ತು. ಈಗ ಮತ್ತೆ ಮಂಡ್ಯದಲ್ಲೇ ಹೆಣ್ಣು ಭ್ರೂಣ ಪತ್ತೆ ಪ್ರಕರಣ ಬೆಳಕಿಗೆ ಬಂದಿರುವುದು ಆರೋಗ್ಯ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.