ಮಹಾತ್ಮ ಗಾಂಧೀಜಿ ಅವರ ಕನಸಿಗೆ ವಿರುದ್ಧವಾದ ಭಾರತ ನಿರ್ಮಾಣವಾಗುತ್ತಿದೆ. ಪ್ರಸ್ತುತ ದಿನಗಳ ಬೆಳವಣಿಗೆ ಆತಂಕಕಾರಿಯಾಗಿದೆ ಎಂದು ಪ್ರಗತಿಪರ ವಕೀಲ ಬಿ.ಟಿ ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ ಅಂಗವಾಗಿ ಮಂಡ್ಯದ ಗಾಂಧಿ ಉದ್ಯಾನವನದಲ್ಲಿ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ಕಾರ್ಯಕರ್ತರು ಪ್ರತಿರೋಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ದೇಶದಲ್ಲಿ ನಡೆಯುತ್ತಿರುವ ಧರ್ಮ ಧರ್ಮಗಳ ನಡುವಿನ ಕೋಮು ಹಿಂಸಾಚಾರ ಹಾಗೂ ಮಹಿಳೆಯ ಮೇಲೆ ನಡೆಯುತ್ತಿರುವ ನಿರಂತರ ಲೈಂಗಿಕ ದೌರ್ಜನ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರಂತರ ಮೌನ ವಹಿಸಿರುವುದು ಸರಿಯಲ್ಲ” ಎಂದು ಹೇಳಿದರು.
“ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಮಗೆ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ನಾಯಕರು ಸಿಕ್ಕಿದ್ದಾರೆ. ಆದರೆ ಈಗಿನ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯ ಆಡಳಿತದಲ್ಲಿ ಭಾರತ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ಅಂಕಣಕಾರ ಶಿವಸುಂದರ್ ಅವರು ತಮ್ಮ ಬರಹಗಳ ಮೂಲಕ ಮಾರ್ಮಿಕವಾಗಿ ತಿಳಿಸಿದ್ಧಾರೆ” ಎಂದು ಹೇಳಿದರು.
ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಮಾತನಾಡಿ, “ಗಾಂಧೀಜಿ ಅವರು ಕಂಡ ಕನಸುಗಳು ಇಂದಿಗೂ ಈಡೇರಿಲ್ಲ, ಪ್ರಸ್ತುತ ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೊಸದಾಗಿ 1000 ಮದ್ಯದಂಗಡಿಗಳಿಗೆ ಲೈಸೆನ್ಸ್ ಕೊಡಲು ಮುಂದಾಗಿರುವುದು, ಗಾಂಧಿ ಆಶಯಗಳಿಗೆ ವಿರುದ್ದವಾಗಿದೆ, ಇದನ್ನು ವಾಪಸ್ ಪಡೆಯಬೇಕು” ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಶಾಂತ ಲತಾ ರೂಪ ಸೆಲ್ವಿ ವೈದುನ, ಶೋಭಾ, ಪ್ರತಾಪ್, ವಿದ್ಯಾರ್ಥಿ ಸಂಘಟನೆಯ ನಿತ್ಯ, ಪೂಜಾ, ನವೀನ್, ಆರ್ಮುಗಂ, ನಂದನ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಗತಿಪರರು ಉಪಸ್ಥಿತರಿದ್ದರು.