ಪ್ರಪಂಚದಲ್ಲಿಯೇ ಅತಿ ಕಡಿಮೆ ಕೂಲಿಗೆ ದುಡಿಸಿಕೊಳ್ಳಲು ದೇಶ ಭಾರತ. ದೇಶದಲ್ಲಿ ಗುತ್ತಿಗೆ ಪದ್ಧತಿಯಲ್ಲಿ ಕಾರ್ಮಿಕರನ್ನು ದುಡಿಸಬಹುದು ಎಂಬ ನಿಯಮವನ್ನು ಮಾಜಿ ಪ್ರಧಾನಿ ವಾಜಪೇಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಾರಿ ಮಾಡಿದರು. ‘ಕೆಲಸ ಮಾಡಿ ಕೂಲಿ ಕೇಳಬೇಡಿ’ ಎಂಬ ಸಿದ್ದಾಂತವನ್ನು ಬಿಜೆಪಿ ಇಟ್ಟುಕೊಂಡಿದೆ. ಅದರ ಜೊತೆಗೆ, 2001ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ‘ಗುತ್ತಿಗೆ ಪದ್ಧತಿ ಜಾರಿಯಲ್ಲಿರಬಹುದು’ ಎಂಬ ತೀರ್ಪು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೈಕೋರ್ಟ್ ವಕೀಲ, ಕಾರ್ಮಿಕ ಮುಖಂಡ ಕೆ ಬಾಲನ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಮತ್ತು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಮಿಕರ ಒಕ್ಕೂಟವು ಸೋಮವಾರ ಆಯೋಜಿಸಿದ್ದ ‘ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶದಲ್ಲಿ’ ಅವರು ಮಾತನಾಡಿದರು. “ಕಡಿಮೆ ಕೂಲಿಗೆ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರ ಮೇಲೆ ಗುತ್ತಿಗೆದಾರರ ಶೋಷಣೆ ನಡೆಸುತ್ತಿದ್ದಾರೆ. ಕಾರ್ಮಿಕರ ಶ್ರಮವನ್ನು ಹೀರಿ, ಅವರ ಬಾಯಿಗೇ ಮಣ್ಣಾಕುವ ಸರ್ಕಾರದ ಧೋರಣೆ ಬದಲಾಗಬೇಕು” ಎಂದು ಕಿಡಿಕಾರಿದರು.
“ಬದ್ಧತೆ ಇರುವ ರಾಜ್ಯ ಸರ್ಕಾರ ಗುತ್ತಿಗೆ ಪದ್ದತಿಯನ್ನು ಕೈಬಿಟ್ಟು, ನೇರಪಾವತಿಯಡಿ ಕಾರ್ಮಿಕರಿಗೆ ವೇತನ ಪಾವತಿ ಮಾಡಿಸಬೇಕು. ಅನ್ನಭಾಗ್ಯ ಯೋಜನೆಯಡಿ ಕೆಲಸ ಮಾಡುವ ಹಮಾಲಿ ಕಾರ್ಮಿಕರನ್ನು ಖಾಯಂ ಮಾಡಬೇಕು. ಇಎಸ್ಐ-ಪಿಎಫ್, ಹೌಸ್ ರೆಂಟ್, ಆರೋಗ್ಯ ವಿಮೆಯಂತಹ ಅಗತ್ಯ ಮೂಲಭೂತ ಸೌಕರ್ಯಗಳು, ಬದುಕಿಗೆ ಭದ್ರತೆ ಕೊಡಬೇಕು. ಇಲ್ಲವಾದಲ್ಲಿ, ಎಲ್ಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರೆಲ್ಲ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “80 ಸಾವಿರ ಕೊಟ್ಟು ಒಂದು ಕೆಜಿ ಅಣಬೆ ತಿನ್ನುವ ಮೋದಿ ಕಾರ್ಮಿಕರಿಗೆ ಅಣಬೆಯಲ್ಲ, ಅನ್ನ ತಿನ್ನಲು 30 ಸಾವಿರ ಕನಿಷ್ಠ ವೇತನ ಕೊಡಬಾರದಾ. ಕಾರ್ಮಿಕರ ಪರವಾಗಿ ಇದ್ದಂತಹ ಬಹುತೇಕ ಕಾನೂನು -ಕಾಯ್ದೆಗಳನ್ನೆಲ್ಲ ರದ್ದಪಡಿಸಿ ಕೇವಲ ನಾಲ್ಕು ಕೋಡ್ಗಳನ್ನು ತಂದಿರುವ ಮೋದಿ ಕಾರ್ಮಿಕರ ಹಕ್ಕುಗಳನ್ನೆಲ್ಲ ಕಿತ್ತುಕೊಂಡಿದ್ದಾರೆ. ಆ ನಾಲ್ಕು ಕೋಡ್ಗಳನ್ನು ಕಿತ್ತು ಬಿಸಾಕಬೇಕು” ಎಂದು ಗುಡುಗಿದರು.
ಸಮಾವೇಶದಲ್ಲಿ ಮಾತನಾಡಿದ ಜೆಸಿಟಿಯು ರಾಜ್ಯ ಸಂಚಾಲಕ ಕೆ ವಿ ಭಟ್, “ಬೆಲೆ ಏರಿಕೆ ನಾಗಾಲೋಟದಲ್ಲಿದೆ. ಆದರೆ, ಕಾರ್ಮಿಕರ ವೇತನ ಮಾತ್ರ ಕಾಲಕಾಲಕ್ಕೆ ಹೆಚ್ಚಳ ಆಗುತ್ತಿಲ್ಲ. ಹಾಗಾಗಿ, ಕಳೆದ 10-15 ವರ್ಷಗಳಿಂದ ಕೇವಲ 12-15 ಸಾವಿರ ವೇತನದಲ್ಲಿ ಬದುಕು ನೂಕುತ್ತಿದ್ದಾರೆ. ಬಹುತೇಕ ಕಾರ್ಮಿಕರಿಗೆ ಇಎಸ್ಐ-ಪಿಎಫ್ ಕಾರ್ಡ್ಗಳನ್ನೇ ನೀಡಲಾಗುತ್ತಿಲ್ಲ. ಹಿಂದೆ ಇದ್ದ ಬಿಜೆಪಿ ಸರ್ಕಾರವಂತೂ ಹೆಜ್ಜೆ-ಹೆಜ್ಜೆಗೂ ಕಾರ್ಮಿಕ ವಿರೋಧಿ ನೀತಿಗಳನ್ನೇ ತಂದಿತ್ತು. ಹೊಸ ಸರ್ಕಾರ ಎಲ್ಲ ಕಾರ್ಮಿಕ ವಿರೋಧಿ ನಿಯಮಗಳನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಕಾರ್ಯರ್ದಶಿ ವೀರಸಂಗಯ್ಯ ಮಾತನಾಡಿ, “ಕಾರ್ಮಿಕರು ದೇಹ ದಂಡಿಸಿ ಎಂಟು ಗಂಟೆ ದುಡಿಮೆ ಮಾಡುವುದೇ ಕಷ್ಟ. ಹೀಗಿರುವಾಗ ಹನ್ನೆರಡು ಗಂಟೆ ದುಡಿಮೆ ಮಾಡಬೇಕೆಂದು ಬಿಜೆಪಿ ಸರ್ಕಾರ ನೀತಿ ರೂಪಿಸಿದೆ. ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಅವರು ಜಾತಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ಅಂತವರಿಗೆ ಕಾರ್ಮಿಕರು ಸಿಕ್ಕಸಿಕ್ಕಲ್ಲಿ ಛೀಮಾರಿ ಹಾಕಬೇಕು” ಎಂದು ಕರೆ ಕೊಟ್ಟರು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಉದ್ಯೊಗ ಭದ್ರತೆ ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಹಮಾಲಿ ಕಾರ್ಮಿಕರ ಪ್ರತಿಭಟನೆ
ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷೆ ಗೌರಿ ಮಾತನಾಡಿ, “ಹಮಾಲಿ-ಬೀದಿ ಕಾರ್ಮಿಕರು, ಪೌರ ಕಾರ್ಮಿಕರು ಸೇರಿದಂತೆ ತಳಸ್ಥರದ ಕೆಲಸಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರು ಕೆಳ ಜಾತಿಯ, ಅಸ್ಪೃಶ್ಯ ಸಮುದಾಯದ ಜನರು ಮಾತ್ರ. ದೊಡ್ಡ ಹಂತದ ಕೆಲಸಗಳನ್ನು ಮಾಡುತ್ತಿರುವವರು ಬ್ರಾಹ್ಮಣರು ಸೇರಿದಂತೆ ಪ್ರಬಲ ಜಾತಿಯವರು. ದುಡಿಮೆ ಕ್ಷೇತ್ರದಲ್ಲಿ ಇರುವ ಈ ಜಾತಿ ಶ್ರೇಣಿಯನ್ನು ತೊಡೆದು ಹಾಕಬೇಕು” ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಡಾ. ಎಚ್.ವಿ ವಾಸು, “ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರನ್ನು ಆಗಾಗ್ಗೆ ಬದಲಿಸಲಾಗುತ್ತಿದೆ. ಅಂತೆಯೇ, ಸರ್ಕಾರಗಳು ಕೂಡ ಬದಲಾಗುತ್ತವೆ. ದಾಖಲೆಯ ಓಟು ಪಡೆದು ಅಧಿಕಾರ ಪಡೆದಿರುವ ಹೊಸ ಸರ್ಕಾರವನ್ನು ಕಾರ್ಮಿಕರ ಪರವಾಗಿ ಕೆಲಸ ಮಾಡುವಂತೆ ಒತ್ತಾಯಿಸಬೇಕು. ಹಿಂದೆ ಇದ್ದ ಸರ್ಕಾರ ಕಾರ್ಮಿಕ ವಿರೋಧಿಯಾಗಿತ್ತು ಎನ್ನುವ ಕಾರಣಕ್ಕೆ, ಅನ್ನಭಾಗ್ಯ ಯೋಜನೆಯ ಹಮಾಲಿ ಕಾರ್ಮಿಕರು ಸೇರಿದಂತೆ ಬಡವರು, ಕೆಳವರ್ಗದ ಜನರು ಮಧ್ಯಮ ವರ್ಗದವರು ಹೆಚ್ವಿನ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಓಟು ಕೊಟ್ಟಿದ್ದಾರೆ. ವೋಟು ಕೊಟ್ಟ ಬಡವರಿಗಾಗಿ ಇಂದಿನ ಸರ್ಕಾರ ಕೆಲ ಮಾಡಬೇಕು” ಎಂದು ಒತ್ತಾಯಿಸಿದರು.
“ಕಳೆದ ಐದು ವರ್ಷದಲ್ಲಿ ರಾಜ್ಯದ ಅನ್ನಭಾಗ್ಯ ಯೋಜನೆಯ ಹಮಾಲಿ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿತ್ತು. ಎಷ್ಟೇ ಹೋರಾಟ ಮಾಡಿದರೂ 1 ರೂಪಾಯಿ ವೇತನ ಹೆಚ್ಚಳವಾಗಲಿಲ್ಲ. ಇಂದಿನ ಸರ್ಕಾರ ಕೂಡ ರಾಜ್ಯ ಬಜೆಟ್ನಲ್ಲಿ ವಿಶೇಷವಾಗಿ ಕಾರ್ಮಿಕರ ಪರವಾಗಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಗ್ಯಾರಂಟಿ ಯೋಜನೆಗಳ ಒಳಗೆ ಎಲ್ಲ ವಿಭಾಗದ ಕಾರ್ಮಿಕರು ಬರುತ್ತಾರೆ ಅನ್ನೋದು ಸಾಕಾಗಲ್ಲ” ಎಂದರು.