ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ಸೋಮವಾರ ಹಮ್ಮಿಕೊಂಡಿದ್ದ ಬಸವಕಲ್ಯಾಣ ಬಂದ್ ಚಳವಳಿಗೆ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಸಾಥ್ ನೀಡಿದವು.
ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ಬೆಳಿಗ್ಗೆಯಿಂದ ಕೆಲ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ , ಮುಂಗಟ್ಟು ಮುಚ್ಚುವುದರ ಮೂಲಕ ಪ್ರತಿಭಟನೆಗೆ ಬೆಂಬಲಿಸಿದರು.

ನಗರದ ಕೋಟೆಯಿಂದ ಆರಂಭವಾದ ಮೆರವಣಿಗೆ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ಕೇಂದ್ರ ಸರ್ಕಾರ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಿದರು.
ʼರಾಜ್ಯಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಕೆಲವರಿಗೆ ಫ್ಯಾಷನ್ ಆಗಿದೆ. ಅದರ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂಬ ಆಕ್ಷೇಪಾರ್ಹವಾಗಿ ಮಾತನಾಡಿ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ. ಇದರಿಂದ ದೇಶದ ಜನರ ಭಾವನೆಗೆ ದಕ್ಕೆ ತಂದಿದ್ದಾರೆ. ತಕ್ಷಣವೇ ಸಂಪುಟದಿಂದ ಅವರನ್ನು ವಜಾಗೊಳಿಸಬೇಕುʼ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಮಾತನಾಡಿ, ʼಸಂಸತ್ತಿನಲ್ಲಿ ಬಾಬಾ ಸಾಹೇಬ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳು ಖಂಡನೀಯವಾಗಿವೆ. ಸಂವಿಧಾನದಿಂದಲೇ ಗೃಹ ಮಂತ್ರಿಯಾದ ಅಮಿತ್ ಶಾ ಅವರು ಡಾ.ಬಾಬಾ ಸಾಹೇಬ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ಬಿ.ನಾರಾಯಣ ಮಾತನಾಡಿ, ಶತಮಾನಗಳಿಂದ ಇದ್ದ ಜಾತಿ ವರ್ಣ ವ್ಯವಸ್ಥೆ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಬಾಬಾ ಸಾಹೇಬ್ ಅಂಬೇಡ್ಕರ್, ಇಂದು ದೇಶ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುತ್ತಿದ್ದರೆ ಅದಕ್ಕೆ ಬಾಬಾ ಸಾಹೇಬರ ಹೋರಾಟವೇ ಕಾರಣ. ಶೋಷಿತ, ತಳಸಮುದಾಯದಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನಿಸಿದ್ದು ತೀವ್ರವಾಗಿ ಖಂಡಿಸುತ್ತೇನೆʼ ಎಂದರು.
ಈ ಸುದ್ದಿ ಓದಿದ್ದೀರಾ? ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?
ಪ್ರತಿಭಟನೆಯಲ್ಲಿ ಮುಖಂಡ ಧನರಾಜ್ ತಾಳಂಪಳ್ಳಿ, ಸುರೇಶ ಮೋರೆ, ಪಿಂಟು ಕಾಂಬಳೆ, ಸಂದೀಪ ಮುಕಿಂದೆ, ಚೇತನ್ ಕಾಡೆ, ಶಂಕರ್ ಫುಲೆ, ಶಂಕರ್ ಫುಲೆ, ಮಹಾದೇವ ಗಾಯಕವಾಡ, ವಾಮನ ಮೈಸಲ್ಗೆ, ವಿಜಯಕುಮಾರ್ ಡಾಂಗೆ, ಜೈಭೀಮ್ ಕೊಳೆ, ಸಾಗರ್, ಪ್ರಫುಲ್ ಗಾಯಕವಾಡ, ಅಭಿಜಿತ್ ಸೂರ್ಯವಂಶಿ, ಶ್ರೀಕಾಂತ್ ಕಾಂಬಳೆ, ಗೌತಮ್ ಜಾಂತೆ, ಸವಿತಾ ಕಾಂಬಳೆ, ಇಕ್ರಾಮ್ ಖಾದಿವಾಲೆ, ಮಿಲಿಂದ್ ಸಾಗರ್, ನಿತಿನ್ ಡಾಂಗೆ, ಚಂದ್ರಕಾಂತ ವಾಘಮಾರೆ, ತಹೇರ್ ಭಾಯ್, ನವಾಜ್ ಖುರೇಸಿ, ಮನೋಹರ ಮೈಸೆ, ವಿಲಾಸ ನಾಟೇಕರ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಜನರು ಪಾಲ್ಗೊಂಡಿದ್ದರು.