ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕಾಂಗ್ರೆಸ್ ಶಾಸಕ, ಸಚಿವರ ನಡೆ ಖಂಡಿಸಿ ಹಾಗೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಕಲಬುರಗಿ, ಬೀದರ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ನಗರದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಫಲಕಗಳನ್ನು ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿದರು.

ʼಸಿಎಂ ಸಿದ್ದರಾಮಯ್ಯನವರಿಗೆ ಬೆಂಬಲಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರ ಭಾವಚಿತ್ರಕ್ಕೆ ಅವಮಾನಿಸಿ ಅವರ ಭಾವಚಿತ್ರ ದಹಿಸಲಾಗಿದೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಜ್ಯಪಾಲರಿಗೆ ಅವಮಾನಿಸಿದ ಕಾಂಗ್ರೆಸ್ಸಿಗರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಬೇಕುʼ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ,ನಗರಾಧ್ಯಕ್ಷ ಚಂದು ಪಾಟೀಲ, ಎಂಎಲ್ಸಿ ಶಶೀಲ ನಮೋಶಿ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಶೋಭಾ ಬಾಣಿ, ಅರುಣಕುಮಾರ ಪಾಟೀಲ್, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ ಸೇರಿದಂತೆ ಮುಖಂಡರಾದ ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಡಾ.ಸುಧಾ ಹಾಲ್ಕಾಯಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಬೀದರ್ : ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬೀದರ್ ನಗರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಗಣೇಶ ಮೈದಾನದಿಂದ ಆರಂಭಗೊಂಡು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಛತ್ರಪತಿ ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿದರು. ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಶರಣು ಸಲಗರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ʼರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ದೂರು ಆಧರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ಶಾಸಕರು, ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯʼ ಎಂದರು.
ʼಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾಗೆ ಬಂದ ಗತಿ ತಮಗೂ ಬರುತ್ತದೆ. ನಾವು ಕಾಂಗ್ರೆಸ್ಸಿಗರು ರಾಜಭವನಕ್ಕೆ ನುಗ್ಗಿ ತಮ್ಮನ್ನು ಓಡಿಸುವ ಕೆಲಸ ಮಾಡುತ್ತೇವೆʼ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿಕೆ ನೀಡಿದ್ದಾರೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಕೃಷ್ಣ ಬೈರೇಗೌಡ, ದಿನೇಶ ಗುಂಡುರಾವ್, ಈಶ್ವರ್ ಖಂಡ್ರೆ ಹಾಗೂ ಶಾಸಕ ನಂಜೇಗೌಡ ಅವರು ರಾಜ್ಯಪಾಲರನ್ನು ನಿಂದಿಸಿದ್ದಾರೆ. ಇವರ ವಿರುದ್ಧ ಜಾತಿ ನಿಂದನೆ, ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತಕ್ಷಣ ಕಾನೂನು ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಮುಖ್ಯ ನಿರ್ಧಾರಗಳಿಂದ ಹಿಂದೆ ಸರಿದ ಮೋದಿ, ಇದು ಪ್ರಜಾಸತ್ತೆಯ ಗೆಲುವು
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಶಾಸಕ ಗುಂಡಪ್ಪಾ ವಕೀಲ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಮುಖಂಡ ಈಶ್ವರ್ ಸಿಂಗ್ ಠಾಕೂರ್, ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ್ ಹೊಸಳ್ಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ, ಕಿರಣ ಪಾಟೀಲ್, ಶಿವಾನಂದ ಮಂಠಾಳಕರ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.