ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವೆ ಮೋಟಮ್ಮ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಟ್ ವಿರುದ್ಧ ಉತ್ತರ ಕನ್ನಡ ಕಾಂಗ್ರೆಸ್ ಮುಖಂಡ, ವಕೀಲ ಮಂಜುನಾಥ ನಾಯಕ್ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಕಲಿಸಿದ್ದಾರೆ.
ಆಗಸ್ಟ್ 20ರಂದು ಫೇಸ್‌ಬುಕ್‌ನಲ್ಲಿ ವಿಶ್ವೇಶ್ವರ ಭಟ್ ಮಹಿಳಾ ವಿರೋಧಿ ಮತ್ತು ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಪೋಸ್ಟ್‌ನಲ್ಲಿ ಹಾಲಿವುಡ್ ನಟಿ ಮರ್ಲಿನ್ ಮೆನ್ರೋ ಹೇಳಿಯೊಂದನ್ನು ಉಲ್ಲೇಖಿಸಿ , “ಹೆಣ್ಣು ಮಕ್ಕಳು ಯಾವ ಡ್ರೆಸ್ಸನ್ನೂ ಬಹಳ ದಿನಗಳ ಕಾಲ ಇಷ್ಟಪಡುವುದಿಲ್ಲ. ಅಂದರೆ ಟೈಟ್ ಡ್ರೆಸ್ಸನ್ನು ಯಾವತ್ತೂ ಧರಿಸುವುದಿಲ್ಲ. ಆಗೊಮ್ಮೆ ಈಗೊಮ್ಮೆ ಧರಿಸಿದಾಗ ಮನೆಯಲ್ಲಿ ಸದನ ಸದೃಶ ವಾತಾವರಣ ನಿರ್ಮಿಸಬಾರದು. ಕೆಲ ದಿನಗಳ ಬಳಿಕ ಮಗಳಿಗೆ ನೀವು ಅಂಥ ಡ್ರೆಸ್ ಧರಿಸು ಅಂದರೂ ಧರಿಸುವುದಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಮಕ್ಕಳು ಟೈಟ್ ಡ್ರೆಸ್ ಧರಿಸಿದರೇ ಚೆಂದ. ಇನ್ನು ಲಕ್ಷ್ಮೀ ಹೆಬ್ಬಾಳ, ಮೋಟಮ್ಮ, ಮಮತಾ ಬ್ಯಾನರ್ಜಿ ಅಂಥ ಡ್ರೆಸ್ ಧರಿಸಿದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಾ? ಒಮ್ಮೆ ಯೋಚಿಸಿ” ಎಂದು ಬರೆದಿದ್ದರು.

“ಭಟ್ ಅವರ ಅಸಹ್ಯ ಹೇಳಿಕೆಗಳು ಬಾಲಿಷವಾಗಿದ್ದು, ಮಹಿಳೆಯರಿಗೆ ಅಪಮಾನ, ಅಪಹಾಸ್ಯ ಮಾಡಿವೆ. ಆತ ಮಹಿಳೆಯರ ದೇಹ, ಉಡುಗೆ-ತೊಡುಗೆಗಳ ಬಗ್ಗೆ ವ್ಯಂಗ್ಯ ಮಾಡಿದ್ದು, ಅವರ ಘಟನೆಗೆ ಧಕ್ಕೆ ತರುವಂತಿವೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹರಡುತ್ತದೆ. ಹಾಗಾಗಿ, ಭಟಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಮಂಜನಾಥ್ ನಾಯಕ್ ದೂರಿನಲ್ಲಿ ವಿವರಿಸಿದ್ದಾರೆ.