ಅಸಹಿಷ್ಣುತೆ ಈ ದೇಶವನ್ನು ಆಳುತ್ತಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಇಪ್ಪತ್ತು ವರ್ಷಗಳ ನಂತರವೂ ಕಾಪಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಕೇರಳದ ಮಾಜಿ ಸಚಿವೆ, ಶಾಸಕಿ ಶೈಲಜಾ ಟೀಚರ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಇದ್ದಾರೆ. ಅವರು ಕೋಮುವಾದಿಗಳನ್ನು ಸೋಲಿಸಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದಗಳು. ಕೋಮುವಾದಿ ಶಕ್ತಿಗಳನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆ” ಎಂದರು.
“ಜಾತ್ಯಾತೀತತೆ ನಮ್ಮ ಸಂವಿಧಾನದ ಗುಣ. ವಿವಿಧೆತೆಯಲ್ಲಿ ಏಕತೆ ನಮ್ಮ ವೇದ ವಾಕ್ಯ. ಸಂಘಪರಿವಾರ ಇದನ್ನು ಒಪ್ಪುವುದಿಲ್ಲ. ಸನಾತನ ಧರ್ಮ ಎಂದರೇನು? ಅದನ್ನು ಖಂಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಸಂಘಪರಿವಾರದ ಸನಾತನ ಧರ್ಮವೇ ಬೇರೆ. ದೇವರೇ ಚಾತುರ್ವರ್ಣ ರಚಿಸಿದ್ದಾನೆ” ಎನ್ನುತ್ತಾರೆ.
“ಬ್ರಾಹ್ಮಣರು ತಲೆಯಲ್ಲಿ ಹುಟ್ಟಿದವರು, ವಿದ್ಯೆ ಅವರಿಗೆ ಎನ್ನುವುದನ್ನು ನಾವು ಒಪ್ಪಲು ಸಾಧ್ಯವೇ? ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವುದನ್ನು ಒಪ್ಪಲು ಸಾಧ್ಯವೇ? ಇಲ್ಲ, ಯಾವುದೂ ಸಾಧ್ಯವಿಲ್ಲ” ಎಂದು ಹೇಳಿದರು.
“ಪ್ರಜಾಪ್ರಭುತ್ವವನ್ನು ನಾವು ಉಳಿಸಬೇಕಾಗಿದೆ. ಹಿಂದುತ್ವ ಪರಿಕಲ್ಪನೆ ಅಂದರೆ ಒಡೆದು ಆಳುವ ಪರಿಕಲ್ಪನೆ. ಫ್ಯಾಸಿಸಂ ನಮ್ಮನ್ನು ಆಳುತ್ತಿದೆ. ಜನರನ್ನು ನಿಯಂತ್ರಿಸುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೆಲವರಿಗೆ ʼಇಂಡಿಯಾʼವೆಂಬ ಪದವನ್ನೇ ಕೇಳಲು ಆಗುತ್ತಿಲ್ಲ: ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ
“ಗಾಂಧೀಜಿ ಯಾರು? ಸಾವರ್ಕರ್ ಯಾರು? ಎಂಬುದು ನಮಗೆ ತಿಳಿದಿದೆ. ಅವರು ಸನಾತನ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಇಂದು ಏನಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಅವಿಶ್ವಾಸ ಗೊತ್ತುವಳಿಯನ್ನು ವಿರೋಧ ಪಕ್ಷಗಳು ಮಂಡಿಸಿದಾಗ ಮಣಿಪುರದ ಬಗ್ಗೆ ಕೆಲವೇ ಕೆಲವು ನಿಮಿಷಗಳು ಮೋದಿ ಮಾತನಾಡಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೊರಾನಾ ಸಮಯದಲ್ಲಿ ಗೋವಿನ ಗಂಜಲ ಸವರಿಕೊಳ್ಳಿ ಎಂದರು. ದೇಶ ಈ ದಿಕ್ಕಿನಲ್ಲಿ ಸಾಗುತ್ತಿದೆ. ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು, ಸೆಕ್ಯುಲರಿಸಂ ಉಳಿಸಲು ನಾವು ಗೌರಿ ಹೆಸರಲ್ಲಿ ಮುಂದಡಿ ಇಡಬೇಕಾಗಿದೆ” ಎಂದರು.