ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕತ್ರಘಟ್ಟ ಗ್ರಾಮದ ಪರಿಶಿಷ್ಟ ಜನಾಂಗದ ಜಯಕುಮಾರನ ಸಜೀವ ದಹನ ಹಾಗೂ ಪೊಲೀಸರ ಕರ್ತವ್ಯಲೋಪ ಖಂಡಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆ ಬಳಿಕ ಪ್ರತಿಭಟನಾಕಾರರು, ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮದ್ದೂರು ತಾಲೂಕಿನ ತಹಶೀಲ್ದಾರ್ ಮೂಲಕ ಗೃಹಮಂತ್ರಿ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, “ದಲಿತ ಜಯಕುಮಾರನನ್ನು ಅದೇ ಗ್ರಾಮದ ರೌಡಿಶೀಟರ್ ಅನಿಲ್‌ಕುಮಾರನು ಸಜೀವ ದಹನ ಮಾಡಿ ಅಮಾನುಷವಾಗಿ ಕೊಲೆಗೈದಿರುವುದು ಖಂಡನೀಯ. ಮೃತ ಜಯಕುಮಾರನು ಮೇ 15ರಂದು, ʼಅನಿಲ್ ಕುಮಾರನಿಂದ ನನಗೆ ಪ್ರಾಣ ಭಯವಿದೆ, ನನಗೆ ರಕ್ಷಣೆ ನೀಡಿʼ ಎಂದು ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವಹಿಸದ ಕಾರಣ ಅಮಾಯಕ ಜಯಕುಮಾರನ ಕೊಲೆಗೆ ಪೊಲೀಸರೂ ಕೂಡ ನೇರ ಹೊಣೆಗಾರರಾಗಿದ್ದಾರೆ” ಎಂದು ಆರೋಪಿಸಿದರು.
“ಮೇ 17 ಘಟನೆ ನಡೆದಿದ್ದು, ಕೊಲೆ ಮಾಡಿರುವುದು ಕಂಡ ಬಂದರೂ, ಡಿವೈಎಸ್‌ಪಿ ಚಲುವರಾಜು, ಪಿಐ ಆನಂದೇಗೌಡ, ಪಿಎಸ್‌ಐ ಸುಬ್ಬಯ್ಯ, ಮುಖ್ಯಪೇದೆ ವೈರಮುಡಿಗೌಡ ಇವರುಗಳು ಕೊಲೆಗಾರರನ್ನು ರಕ್ಷಿಸಲು ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸುವ ಬದಲು ಆತ್ಮಹತ್ಯೆ ಪ್ರಕರಣವೆಂದು ದಾಖಲು ಮಾಡಿ, ಕರ್ತವ್ಯಲೋಪವೆಸಗಿದ್ದಾರೆ. ಈ ಮೂಲಕ ಪೊಲೀಸ್ ಅಧಿಕಾರಿಗಳು ದಲಿತ ವಿರೋಧಿ ನೀತಿಗಳನ್ನು ಸಾಬೀತುಪಡಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಯಕುಮಾರನ ಹೆಂಡತಿ ಓದು-ಬರಹ ತಿಳಿಯದವರಾಗಿದ್ದು, ಸಾಕ್ಷರತೆಯಿಂದ ಸಹಿ ಮಾತ್ರ ಕಲಿತಿದ್ದಾರೆ. ಇದನ್ನು ಅರಿತ ಪೊಲೀಸರು ಆ ಹೆಣ್ಣುಮಗಳಿಗೆ ಒತ್ತಡ ಹಾಕಿ ಸಹಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇ 20 ರಂದು ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿರುವ ವಿಷಯ ಗೊತ್ತಾಗಿ ನಾಗಮಂಗಲ ಡಿವೈಎಸ್‌ಪಿ ಅವರಿಗೆ ಕೊಲೆ ಪ್ರಕರಣ ದಾಖಲಿಸಲು ದೂರು ಸಲ್ಲಿಸಲಾಗಿದ್ದರೂ ಕೂಡ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಗೋಡೆ ಬರಹ ಕ್ಯಾಂಪೇನ್‌ಗೆ ಪೊಲೀಸರ ವಿರೋಧ
“ಕೊಲೆಯಾದ ಜಯಕುಮಾರನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹50 ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಕೊಲೆಮಾಡಿರುವ ರೌಡಿಶೀಟರ್ ಆನಿಲ್‌ಕುಮಾರ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಆತನಿಗೆ ಕಠಿಣ ಗಲ್ಲುಶಿಕ್ಷೆ ನೀಡಬೇಕು. ಕೊಲೆ ಮಾಡಿ ರೌಡಿಶೀಟರ್ ಅನಿಲ್ ಕುಮಾರ್‌ನನ್ನ ರಕ್ಷಿಸಲು ಆತ್ಮಹತ್ಯೆ ಪ್ರಕರಣ ದಾಖಲಿಸಿ ಕರ್ತವ್ಯಲೋಪ ಎಸಗಿರುವ ಡಿವೈಎಸ್‌ಪಿ ಚಲುವರಾಜು, ಪಿ.ಐ.ಆನಂದೇಗೌಡ, ಪಿ.ಎಸ್.ಐ ಸುಬ್ಬಯ್ಯ, ಮುಖ್ಯ ಪೇದೆ ವೈರಮುಡಿಗೌಡ ಇವರುಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಆತ್ಮಹತ್ಯೆಯ ಪ್ರಕರಣವನ್ನು ಕೈಬಿಟ್ಟು ಕೊಲೆ ಪ್ರಕರಣ ದಾಖಲಿಸಿ ಜಯಕುಮಾರನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಆಗ್ರಹಿಸಿದರು.