ಕೆ ಆರ್ ಪೇಟೆ | ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗಿಳಿದ ಕರ್ನಾಟಕ ಪಬ್ಲಿಕ್‌ ಶಾಲೆ; ಉಲ್ಲಂಘನೆಯಾಯಿತೇ ಶಿಕ್ಷಣದ ಹಕ್ಕು?

Date:

Advertisements

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅನಗತ್ಯ ದಾಖಲಾತಿಗಳನ್ನು ಮಾಡಿಕೊಂಡಿದ್ದು, ಪೋಷಕರಿಂದ ವಂತಿಗೆಯ ಹೆಸರಿನಲ್ಲಿ ಅನಧಿಕೃತ ಶುಲ್ಕ ಪಡೆಯುತ್ತಿದ್ದಾರೆ. ಇದು ಪೋಷಕರಿಗೆ ಹೊರೆಯಾಗುತ್ತದೆ. ಹಾಗಾಗಿ ಸರ್ಕಾರ ಹೆಚ್ಚುವರಿ ಸೆಕ್ಷನ್‌ಗೆ ಅನುಮತಿ ನೀಡಿ ಶಾಲೆಗೆ ಮೂಲಭೂತ ಸೌಕರ್ಯ ಮತ್ತು ಹೆಚ್ಚಿನ ಶಿಕ್ಷಕರನ್ನು ಒದಗಿಸಬೇಕು ಎಂದು ಆಗ್ರಹಿಸಿ ಕೆ.ಆರ್‌ ಪೇಟೆಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಬಿಇಒ ಅವರಿಗರ ಮನವಿಯನ್ನೂ ನೀಡಿದ್ದಾರೆ.

“ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯು(KPS) ಸರ್ಕಾರಿ ಶಾಲೆಯಲ್ಲಿ ಉರ್ದು ಶಾಲೆ ಒಳಗೊಂಡಂತೆ LKGಯಿಂದ ಪದವಿ ಪೂರ್ವ(PUC) ಶಿಕ್ಷಣದವರೆಗೂ ಅಂದಾಜು ₹2300ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ, ಎಲ್ಲ ಸರ್ಕಾರಿ ಶಾಲೆಗಳಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ಸರ್ಕಾರಿ ಆದೇಶವಿದ್ದರೂ ಕ್ರಮವಾಗಿ LKGಗೆ ₹3,600 UKGಗೆ ₹2,600 ಹಾಗೂ 1 ರಿಂದ 7 ನೇ ತರಗತಿ ವರೆಗಿನ ಅಂಗ್ಲ ಮಾಧ್ಯಮದ ಮಕ್ಕಳಿಗೆ ₹5,300 ಶುಲ್ಕ ಪಡೆಯುತ್ತಿರುವ ಶಾಲಾ ಆಡಳಿತ ಮಂಡಳಿಯು ಈ ಹಣಕ್ಕೆ ʼಮಾಡೆಲ್ ಕೋಚಿಂಗ್ ಸೆಂಟರ್’ ಹೆಸರಿನಲ್ಲಿ ಕೇವಲ ₹3,000 ಹಾಗೂ ₹2,000ಕ್ಕೆ ಮಾತ್ರ ರಶೀದಿ ನೀಡುತ್ತಿದೆ. ಅಲ್ಲದೆ ₹5300ನ್ನು 1 ರಿಂದ 7 ನೇ ತರಗತಿಗಳ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳ ಪೋಷಕರಿಂದ ಬ್ಯಾಂಕ್‌ಗೆ ಕಟ್ಟಿಸುತ್ತಿದೆ” ಎಂಬ ಆರೋಪಗಳು ವ್ಯಕ್ತವಾಗಿವೆ.

ಓರ್ವ SDMC ಸದಸ್ಯರು ಈ ಶುಲ್ಕ ವಸೂಲಿಯನ್ನು ವಿರೋಧ ಮಾಡಿದ ಮಾಹಿತಿಯಂತೆ, “ಕೆ ಆರ್‌ ಪೇಟೆ ಕೆಪಿಎಸ್‌ ಶಾಲೆಯ ವಿಚಾರವಾಗಿ ಹಲವು ಬಾರಿ SDMC ಸಭೆಗಳಲ್ಲಿ ನಾನು ಚರ್ಚಿಸಿದಾಗ, ನಮ್ಮಿಂದ ವಿರೋಧವಿದ್ದರೂ ಕೂಡ ಬಹುಮತದ ಕಾರಣಕ್ಕಾಗಿ ಇದು ಮುಂದುವರೆಯುತ್ತ ಬಂದಿದೆ. ಹಾಗಾಗಿ ಶುಲ್ಕ ವಸೂಲಾತಿ ವಿಚಾರವಾಗಿ ತಾವು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಂಡು ಈ ಶುಲ್ಕ ಹಾವಳಿಯನ್ನು ತಪ್ಪಿಸಬೇಕು. ಈ ಶಾಲೆಗೆ ಬರುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.

Advertisements
ಕರ್ನಾಟಕ ಪಬ್ಲಿಕ್‌ ಶಾಲೆ ಶುಲ್ಕ ವಸೂಲಿ

‌”ಮುಂದಿನ ದಿನಗಳಲ್ಲಿ ಹೆಚ್ಚಿನ ಆಂಗ್ಲ ಮಾಧ್ಯಮದ ವಿಭಾಗಗಳಿಗೆ ಅನುಮತಿ ಕೊಡಿಸಿ ಮೂಲ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯನ್ನು ಸರ್ಕಾರವೇ ನೀಗಿಸಬೇಕು. ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ದೊರೆಯುವಂತಾಗಬೇಕು” ಎಂದು ಒತ್ತಾಯಿಸಿದರು.

ಕೆಆರ್‌ ಪೇಟೆ ಬಿಇಒ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಜ್ಯಾದ್ಯಂತ ಕೆಪಿಎಸ್‌ ಶಾಲೆಗಳಿಗೆ LKG ದಾಖಲಾತಿಗೆ ಕೇವಲ 60 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ, ಕೆಆರ್‌ ಪೇಟೆ ಕೆಪಿಎಸ್‌ ಶಾಲೆಯಲ್ಲಿ 105 ಮಂದಿ ಮಕ್ಕಳಿದ್ದಾರೆ. ಎಲ್‌ಕೆಜಿಯಿಂದ ಪಿಯುಸಿವರೆಗೆ 2,430 ಮಕ್ಕಳಿದ್ದಾರೆ. ಸರ್ಕಾರದಿಂದ 21 ಮಂದಿ ಶಿಕ್ಷಕರನ್ನು ಒದಗಿಸಲಾಗಿದೆ. ಆದರೆ ಅಲ್ಲಿಯ ಪೋಷಕರು ಸರ್ಕಾರಿ ಶಾಲೆಯ ದಾಖಲಾತಿಗಳನ್ನು ನಿಗದಿ ಮಾಡಿದರೆ ಹೇಗೆ? ಹೆಚ್ಚುವರಿ ನೀಡಬೇಕು. ನಾವು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಬದಲಿಗೆ ಕೆಪಿಎಸ್‌ ಶಾಲೆ ಕಳುಹಿಸುತ್ತೇವೆಂಬ ಒಪ್ಪಂದದ ಮೇರೆಗೆ ಹಣ ಪಡೆಯುತ್ತಿದ್ದಾರೆ” ಎಂದು ತಿಳಿಸಿದರು.

“ಶಾಸಕರೇ ಎಸ್‌ಡಿಎಂಸಿ ಅಧ್ಯಕ್ಷರಿದ್ದಾರೆ. ಅವರ ನೇತೃತ್ವದಲ್ಲಿಯೇ ಶಾಲೆಯ ಖರ್ಚು ವೆಚ್ಚಗಳು ನಡೆಯುತ್ತಿವೆ. ಮೂಲ ಸೌಕರ್ಯ ಹಾಗೂ ಹೆಚ್ಚಿನ ಶಿಕ್ಷಕರ ನೇಮಕಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 2020ರಿಂದ ಈ ರಿತಿ ಹಣ ಸಂಗ್ರಹಣೆ ನಡೆಯುತ್ತಿದೆ. ಇದೀಗ ಹಣಕಾಸಿನ ಲೆಕ್ಕಾಚಾರದ ವರದಿಯನ್ನು ಕೇಳಿದ್ದೇನೆ. ವರದಿ ಬಂದ ಕೂಡಲೇ ಮಾಹಿತಿ ನೀಡುತ್ತೇನೆ” ಎಂದು ಹೇಳಿದರು.

ಕೆಪಿಎಸ್‌ ಶಾಲೆ ಬಿಲ್ 1

ಕೆಪಿಎಸ್‌ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “UKGಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಗೆಯಾಗಿದ್ದು, ಸೆಕ್ಷನ್‌ ರೀತಿ ನಡೆಸಲಾಗುತ್ತಿದೆ. ಸರ್ಕಾರದ ಅನುದಾನ ಸಾಕಾಗದಿರುವ ಹಿನ್ನೆಲೆಯಲ್ಲಿ ಪೋಷಕರಿಂದ ವಂತಿಗೆ ರೀತಿಯಲ್ಲಿ ಹಣ ಪಡೆಯಲಾಗುತ್ತಿದೆ. ಎಲ್‌ಕೆಜಿಗೆ ದಾಖಲಾಗುವ ಮಕ್ಕಳಿಂದ ₹3,600 ಹಾಗೂ ಇಲ್ಲಿಯ ಯುಕೆಜಿ ಮಕ್ಕಳಿಂದ ₹2,600, ಹೊರಗಿನಿಂದ ಬಂದ ಮಕ್ಕಳಿಂದ ₹3,600 ಪಡೆಯಲಾಗುತ್ತಿದೆ. ಇದರಲ್ಲಿ ₹3000 ಮತ್ತು ₹2,000 ಎಸ್‌ಡಿಎಂಸಿ ಖಾತೆಗೆ ಜಮಾವಾದರೆ, ಉಳಿದ ₹600 ರಿಂದ ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸಲಾಗುತ್ತದೆ” ಎಂದು ಹೇಳಿದರು.

ಒಟ್ಟಾರೆಯಾಗಿ ಈ ಶಾಲೆಯಲ್ಲಿ 2430 ಮಕ್ಕಳಿದ್ದು, ಸರ್ಕಾರ ನೇಮಿಸಿರುವಂತಹ 21 ಮಂದಿ ಶಿಕ್ಷಕರು ಇದ್ದಾರೆ. ನಾವು ಐದು ಮಂದಿ ಶಿಕ್ಷಕರು ಮತ್ತು ಇಬ್ಬರು ಕಂಪ್ಯೂಟರ್‌ ಶಿಕ್ಷಕರು ಹಾಗೂ ಡಿ ಗ್ರೂಪ್‌ ನೌಕರರಿಗೆ ಸೇರಿದಂತೆ ಎಸ್‌ಡಿಎಂಸಿ ಮತ್ತು ಪೋಷಕರಿಂದ ಪಡೆದ ಹಣದಲ್ಲಿ ₹11,70,000(11 ಲಕ್ಷದ 70 ಸಾವಿರ)ವನ್ನು ವೇತನ ನೀಡಲಾಗುತ್ತಿದೆ. ಹಳ್ಳಿ ಮಕ್ಕಳಿಗೂ ಉತ್ತಮ ಗುಣಮಟ್ಟದ ಸಂಬಳ ಸಿಗಬೇಕು ಎಂಬುದೇ ನಮ್ಮ ಆಶಯ. ಹಾಗಾಗಿ ಮಕ್ಕಳ ಹಯಣವನ್ನು ಅವರಿಗೇ ಖರ್ಚು ಮಾಡುತ್ತಿದ್ದೇವೆ” ಎಂದು ಹೇಳಿದರು.

ಒಂದರಿಂದ ಏಳನೇ ತರಗತಿವರೆಗಿನ ಇಲ್ಲಿಯ ಮಕ್ಕಳಿಂದ ₹300 ಹಣ ಪಡೆಯಲಾಗುತ್ತಿದೆ. ಹೊರಗಿನಿಂದ ಬಂದ 5, 6, 7ನೇ ತರಗತಿ ಮಕ್ಕಳಿಂದ ₹5,600 ಪಡೆಯಲಾಗುತ್ತಿದೆ. ಇನ್ನು 8ರಿಂದ 10ನೇ ತರಗತಿಯಲ್ಲಿರುವ ಇಲ್ಲಿ ಮಕ್ಕಳಿಂದ ₹500 ಪಡೆಯಲಾಗುತ್ತಿದೆ. ಹೊರಗಿನವರಿಂದ ₹5,300 ಪಡೆಯಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ಎಲ್ಲ ಮಕ್ಕಳಿಂದಲೂ ಹಣ ಪಡೆಯಲಾಗುತ್ತಿಲ್ಲ. ಎಸ್‌ಡಿಎಂಸಿ ಪೋಷಕರ ಸಭೆ ನಡೆಸಿದ್ದು, ಪೋಷಕರ ಒಪ್ಪಿಗೆಯ ಮೇರೆಗೆ ಹಣ ಸಂಗ್ರಹಿಸಲಾಗುತ್ತಿದೆ. ಆದರೆ ಆ ಹಣ ಮಕ್ಕಳ ಉತ್ತಮ ವಿದ್ಯಭ್ಯಾಸಕ್ಕಾಗಿಯೇ ಬಳಕೆಯಾಗುತ್ತಿದೆ. ತೀರಾ ಬಡವರು ಎನ್ನುವವರಿಂದ ಯಾವುದೇ ರೀತಿಯ ಹಣ ಪಡೆಯುತ್ತಿಲ್ಲ. ಕಳೆದ ವರ್ಷ ಎಷ್ಟೋ ಪೋಷಕರು ವಂತಿಗೆ ನೀಡಿಲ್ಲ. ಕೊಡದಿದ್ದವರ ಬಳಿ ನಾವೂ ಕೂಡ ಕೇಳಿಲ್ಲ” ಎಂದರು.

LKG – 104 ಮಕ್ಕಳಿಗೆ(ತಲಾ ₹3,600 ರಂತೆ) 3 ಲಕ್ಷದ 75 ಸಾವಿರ, UKGಯ 75 ಮಕ್ಕಳಿಂದ 1 ಲಕ್ಷದ 95 ಸಾವಿರ(ತಲಾ ₹2600ದಂತೆ) ಒಟ್ಟು (LKG + UKG) 5 ಲಕ್ಷದ 70 ಸಾವಿರ, 1 ರಿಂದ 5ನೇ ತರಗತಿ ಇಂಗ್ಲಿಷ್ ಮಾಧ್ಯಮ(ತಲಾ ₹5500)
ಅಂದಾಜು 400 ಮಕ್ಕಳಿಗೆ 22 ಲಕ್ಷ ರೂ. 1 ರಿಂದ 7ನೇ ತರಗತಿ(ತಲಾ ₹500ರಂತೆ ಒಟ್ಟು 400 ಮಕ್ಕಳಿಗೆ) 2 ಲಕ್ಷ ರೂ. ಒಟ್ಟು ಪ್ರೈಮರಿಯಲ್ಲೇ 29 ಲಕ್ಷದ 70 ಸಾವಿರ(Finally – 30 ಲಕ್ಷ) ಸಂಗ್ರಹವಾಗುತ್ತದೆ.

ಕೆಪಿಎಸ್‌ ಶಾಲೆ ಬಿಲ್ 2

ಪ್ರೌಢಶಾಲೆಯಲ್ಲಿ ಅಂದಾಜು 800 ಮಕ್ಕಳು(ತಲಾ ಶುಲ್ಕ ₹750 – ₹980 ಅಂತೆ) Average – 800 ರೂ. ಅಂದರೂ
ಒಟ್ಟು 6 ಲಕ್ಷದ 40 ಸಾವಿರ ರೂಪಾಯಿ, ಕಾಲೇಜಲ್ಲಿ 500 ಮಕ್ಕಳು(ತಲಾ – ₹1,850) ಒಟ್ಟು 9 ಲಕ್ಷದ 25 ಸಾವಿರ ಸೇರಿದಂತೆ ಒಟ್ಟು – 15 ಲಕ್ಷದ 65 ಸಾವಿರ, ಸಮೀಪಕ್ಕೆ 16 ಲಕ್ಷ ರೂ. ಸಂಗ್ರಹವಾಗುತ್ತದೆ. ಒಟ್ಟಾರೆ 30 ಲಕ್ಷ +16 ಲಕ್ಷ ಎರಡೂ ಸೇರಿ 46 ಲಕ್ಷ ರೂಪಾಯಿ ಹಣ ಕೆಪಿಎಸ್‌ ಮಕ್ಕಳಿಂದ ವಸೂಲಿಯಾಗುತ್ತಿದೆಯೆಂಬ ಮಾಹಿತಿ ಈ ದಿನ.ಕಾಮ್‌ಗೆ ಮಾಹಿತಿ ಲಭ್ಯವಾಗಿದೆ.

ಕೆ ಆರ್ ಪೇಟೆಯ ಕೆಪಿಎಸ್‌ಸಿ ಉಸ್ತುವಾರಿ ಪ್ರಾಂಶುಪಾಲ ಪುಲಿಗೆರಾಯ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಿಂದಿನ ಪ್ರಾಂಶುಪಾಲರು ಕಳೆದ ಜೂನ್ 30ರಂದು ಸೇವೆಯಿಂದ ನಿವೃತ್ತರಾದರು. ನಾನು ಜುಲೈ 1ರಿಂದ ಉಸ್ತುವಾರಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ, ಈ ವಿಷಯದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ” ಎಂದು ಹೇಳಿ ಕೈ ತೊಳೆದುಕೊಂಡರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿರುವ ಕೆಪಿಎಸ್ ಶಾಲೆಯ ಪೋಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ(SDMC) ನಿರ್ಧಾರದ ಪ್ರಕಾರ ಇಂಗ್ಲಿಷ್ ಮಾಧ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುತ್ತಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಕೆ ಆರ್ ಪೇಟೆ ವಿಧಾನಸಭಾ ಸದಸ್ಯ(ಶಾಸಕ) ಎಚ್ ಟಿ ಮಂಜು ಅವರು ಇಲ್ಲಿಯ SDMC ಅಧ್ಯಕ್ಷರಾಗಿದ್ದಾರೆ.

ಕೆಪಿಎಸ್‌ ಶಾಲೆ ಬಿಲ್ 3

ರಾಜ್ಯ ಸರ್ಕಾರವು 2018-19ರಲ್ಲಿ ರಾಜ್ಯಾದ್ಯಂತ ಕೆಪಿಎಸ್(ಕರ್ನಾಟಕ ಪಬ್ಲಿಕ್‌ ಸ್ಕೂಲ್) ಪ್ರಾರಂಭಿಸಿತು. ಇದು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಕಲಿಸಲು ಸಹಾಯ ಮಾಡುತ್ತದೆ. ಈ ಶಾಲೆಗಳು ಪೂರ್ವ ಪ್ರಾಥಮಿಕ ವಿಭಾಗದಿಂದ ಇಂಗ್ಲಿಷ್ ಮಾಧ್ಯಮ ಸೇರಿದಂತೆ ದ್ವಿಭಾಷಾ ತರಗತಿಗಳನ್ನು‌ ನಡೆಸುತ್ತವೆ. ಕೆಪಿಎಸ್‌ನ ಎಸ್‌ಡಿಎಂಸಿಗಳಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ.

ಸರ್ಕಾರದ ಆದೇಶದಂತೆ 1,023ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಒಟ್ಟು 16 ಪೋಷಕರನ್ನು ಒಳಗೊಂಡ ಎಸ್‌ಡಿಎಂಸಿಯನ್ನು ರಚಿಸಲು ಸೂಚಿಸಲಾಗಿದೆ. ಈ ಎಸ್‌ಡಿಎಂಸಿಯಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುತ್ತಾರೆ. ಶಾಲೆಯ ಅಭಿವೃದ್ಧಿಗಾಗಿ ಹಲವಾರು ಉಪಸಮಿತಿಗಳನ್ನು ರಚಿಸಲಾಗಿದ್ದು, ಎಸ್‌ಡಿಎಂಸಿ ಸಾರ್ವಜನಿಕರು ಮತ್ತು ದಾನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಿ ಶಾಲೆಯ ಅಭಿವೃದ್ಧಿಯನ್ನು ಕೈಗೊಳ್ಳಬಹುದು.

ಕರ್ನಾಟಕ ಪಬ್ಲಿಕ್‌ ಶಾಲೆ ಶುಲ್ಕ ವಸೂಲಿ ತಡೆಗೆ ಮನವಿ

ಕೆ ಆರ್ ಪೇಟೆಯಲ್ಲಿರುವ ಕೆಪಿಎಸ್‌ನ ಎಸ್‌ಡಿಎಂಸಿ ಸಭೆ ನಡೆಸಿ ಮಕ್ಕಳಿಂದ ಶುಲ್ಕ ಸಂಗ್ರಹಿಸಲು ನಿರ್ಧಾರ ತೆಗೆದುಕೊಂಡಿದ್ದು, ಪ್ರತಿ ವರ್ಷ ಶುಲ್ಕವನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆಯೆಂದು ಕಂಡುಬಂದಿದೆ. ಕೆಲವು ವಿದ್ಯಾರ್ಥಿಗಳಿಗೆ ಶಾಲೆಗಳ ಹೆಸರಿನಲ್ಲಿ ರಶೀದಿಗಳನ್ನು ನೀಡಲಾಗಿದ್ದರೆ, ಕೆಲವು ರಶೀದಿಗಳು ಖಾಸಗಿ ತರಬೇತಿ ಕೇಂದ್ರದ ಹೆಸರಿನಲ್ಲಿವೆ. ಕೆಲವು ವಿದ್ಯಾರ್ಥಿಗಳು ಶುಲ್ಕವನ್ನು ನೇರವಾಗಿ ಶಾಲಾ ಪ್ರಾಂಶುಪಾಲರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಜಂಟಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆಯೂ ಕೇಳಲಾಗಿದೆ ಎಂಬ ದೂರುಗಳಿವೆ.

KPS ಶಾಲೆಯಲ್ಲಿ ಕೊರತೆಯಿರುವ ಶಿಕ್ಷಕರ ಭರ್ತಿ ಹಾಗೂ ಹೆಚ್ಚುವರಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹೆಚ್ಚಿನ ವಿಭಾಗಗಳ ಮಾಡಿಕೊಳ್ಳಲು ಮೇಲಧಿಕಾರಿಗಳಿಗೆ ಮನವಿ ಮಾಡಬೇಕಾಗಿರುವ ಕೆಪಿಎಸ್‌ನ ಆಡಳಿತ ಮಂಡಳಿಯು ಪೋಷಕರಿಂದ ಅನಗತ್ಯವಾಗಿ ಶುಲ್ಕ ವಸೂಲಿ ಮಾಡುತ್ತಿದೆ. ಈ ಶಾಲೆಗೆ ಬರುವ ಬಹುತೇಕ ಪೋಷಕರು ಕೂಲಿ ಕಾರ್ಮಿಕರು, ರೈತಾಪಿ ವರ್ಗದವರು ಹಾಗೂ ಗ್ರಾಮೀಣ ಭಾಗದ ಬಡವರಾಗಿದ್ದು, ಈ ಹಣವನ್ನು ಭರಿಸಲು ಅಶಕ್ತರಾಗಿದ್ದೇವೆ. ಅಲ್ಲದೆ ಎರಡ್ಮೂರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಈ ಶುಲ್ಕವು ಹೊರೆಯಾಗಿ ಪರಿಣಮಿಸಿದೆ. ಇದರಿಂದಾಗಿ ಇಂತಹ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ ಎಂಬುದು ಪೋಷಕರ ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿದ್ದೀರಾ? ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಭೇಟಿ; ಪಕ್ಷದ ಒಳಜಗಳಕ್ಕೆ ಸಿಗುವುದೇ ಪರಿಹಾರ?

ಪೋಷಕರು ಮತ್ತು ಶಾಲೆಯ ಕೆಲವು SDMC ಸದಸ್ಯರು ಕೆ ಆರ್ ಪೇಟೆ ತಾಲೂಕಿನ ಬ್ಲಾಕ್ ಶಿಕ್ಷಣ ಅಧಿಕಾರಿ(BEO)ಗೆ ದೂರು ನೀಡಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

“ಮಂಡ್ಯ ಜಿಲ್ಲೆಯ ಹಲವು ಕೆಪಿಎಸ್‌ಗಳು ಮಕ್ಕಳಿಂದ ವಾರ್ಷಿಕ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಶುಲ್ಕವನ್ನು ನಿಗದಿಪಡಿಸಲು ಎಸ್‌ಡಿಎಂಸಿಗೆ ಯಾವುದೇ ಹಕ್ಕಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಬಿಇಒಗೆ ದೂರು ನೀಡಿದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ತನಿಖೆ ನಡೆಸಿ ಶಾಲಾ ಮಕ್ಕಳಿಂದ ಶುಲ್ಕ ವಸೂಲಿ ಮಾಡುತ್ತಿರುವ ಎಸ್‌ಡಿಎಂಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂಬುದು ಪೋಷಕರ ಒತ್ತಾಯವಾಗಿದೆ.

ಸರ್ಕಾರ ಸರಿಯಾದ ರೀತಿಯಲ್ಲಿ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಶುಲ್ಕ ವಸೂಲಾತಿ ಮಾಡುವಂತಹ ದುರಂತಗಳು ಕಂಡುಬಂದಿವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಸರ್ಕಾರಗಳು ಅನುದಾನವನ್ನೇ ನೀಡದಿದ್ದರೆ ಉಳಿಯುವುದಾದರೂ ಹೇಗೆ? ಅಲ್ಲದೆ ವಂತಿಕೆ ಎನ್ನುವ ಹೆಸರಿನಲ್ಲಿ ಪೋಷಕರಿಂದಲೇ ವಸೂಲಾತಿಗೆ ಮುಂದಾದರೆ ಬಡಮಕ್ಕಳು ಶಿಕ್ಷಣ ಪಡೆಯುವುದಾದರೂ ಹೇಗೆ? 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ದೊರೆಯಬೇಕು ಎಂಬ ನಿಯಮವಿದ್ದರೂ ಶುಲ್ಕ ನೀಡುವ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ, ಶುಲ್ಕ ನೀಡಲಾಗದ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡುವುದು ತಾರತಮ್ಯ ಎಸಗಿದಂತಾಗುತ್ತದೆ. ಸರ್ಕಾರ ಬಡವರ ಪರವಾಗಿಯೇ ಇರುವುದು ನಿಜವಾದಲ್ಲಿ ಈ ಶಾಲೆಗೆ ಬೇಕಾದಂತಹ ಸೂಕ್ತ ಅನುದಾನವನ್ನು ಒದಗಿಸಿ ಪೋಷಕರಿಂದ ವಸೂಲಾಗುತ್ತಿರುವ ಹಣಕ್ಕೆ ಕಡಿವಾಣ ಹಾಕಬೇಕು. ಸರ್ಕಾರದ ನಿಯಮಗಳನ್ನು ಮೀರಿ ಸ್ವಯಂ ಕ್ರಮ ಕೈಗೊಂಡು ಪೊಷಕರಿಗೆ ಹೊರೆಯಾಗಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X