ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಿ ಕಲಬುರಗಿ ಜಿಲ್ಲೆಯ ಅಫಜಲಪುರ ಸೊನ್ನ ಬ್ಯಾರೆಜ್‌ನಿಂದ ಘಾಣಗಾಪುರ ಬ್ಯಾರೆಜ್‌ವರೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಗುಡ್ಡೆವಾಡಿ ಗ್ರಾಮದ ಭೀಮಾ ನದಿಯಲ್ಲಿ ಆರಂಭಿಸಿದ್ದ ಆಹೋರಾತ್ರಿ ಧರಣಿ ಇಂದಿಗೆ 20ನೇ ದಿನಕ್ಕೆ ಕಾಲಿಟ್ಟಿದ್ದು, ಅಫಜಲಪುರ ನಗರದ ಬಸವೇಶ್ವರ ಸರ್ಕಲ್‌ನಲ್ಲಿ ರಸ್ತೆ ತಡೆ ಚಳವಳಿ ನಡೆಸುವುದರ ಮೂಲಕ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
“ಅಫಜಲಪುರ ಭೀಮಾ ನದಿ ಬತ್ತಿ ಹೋಗಿದೆ. ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಜನ ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಸ್ಥಳೀಯರು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಫಜಲಪುರ ತಾಲೂಕಿನ ಹಳ್ಳಿಗಳಲ್ಲಿ ಜನರು ಪ್ರಾಣದ ಹಂಗು ತೊರೆದು ಸಾವು ಬದುಕಿನ ಮಧ್ಯದಲ್ಲಿ ಬದುಕು ನಡೆಸುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಬೀಗರು, ನೆಂಟರು, ಸಂಬಂಧಿಕರು ಬೇರೆ ಊರಿನಿಂದ ಯಾರೂ ಕೂಡಾ ಬರಲಾರದಂತಾಗಿದೆ. ಮದುವೆಯಂತಹ ಕಾರ್ಯಕ್ರಮಗಳನ್ನು ನಡೆಸುವುದು ತುಂಬಾ ಸಂಕಷ್ಟಮಯವಾಗಿದ್ದು, ಜನರು ಚಿಂತಾಜನಕರಾಗಿದ್ದಾರೆ. ಇದಕ್ಕೆ ಮುಂದಾಲೋಚನೆಯಾಗಿ ಅಫಜಲಪುರ ತಾಲೂಕಿನ ಹಳ್ಳಿಗಳಲ್ಲಿ ಮತ್ತು ಜೇವರ್ಗಿ ತಾಲೂಕಿನ ಹಳ್ಳಿಗಳಲ್ಲಿ ಹಾಗೂ ಆಲಮೇಲ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೆಂಗಳೂರಿಗೆ ಹೋಗಿ ನೀರಾವರಿ ಸಚಿವರಿಗೆ, ಮುಖ್ಯಮಂತ್ರಿಯವರಿಗೆ ಮತ್ತು ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸ್ಥಳಕ್ಕೆ ಹೋಗಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದೆವು ಹಾಗೂ ಹಲವು ಬಾರಿ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹರಿಸಬೆಕಾಗಿತ್ತು. ಆದರೆ ಈವರೆಗೆ ಸಮಸ್ಯೆ ಬಗೆ ಹರಿಸುವ ಕುರಿತು ಯಾವುದೇ ಕ್ರಮ ಆಗಿಲ್ಲದಿರುವುದನ್ನು ನೋಡಿದರೆ ತುಂಬಾ ಖೇದಕರ ಸಂಗತಿಯಾಗಿದೆ. ಅಫಜಲಪುರ ತಾಲೂಕಿನ ಗುಡ್ಡೆವಾಡಿ ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರಿಲ್ಲದೆ ಉಸುಕಿನಲ್ಲಿ ಕಾಲು ತಿಕ್ಕಿ ಒದ್ದಾಡಿ ಆಕಳು ಸತ್ತು ಹೋಗಿದೆ. ಕುಡಿಯುವ ನೀರಿಲ್ಲದೆ ಜಾನುವಾರುಗಳು ಸಾಯುತ್ತಿವೆ. ಜನರ ಗೋಳಾಟ ಮುಗಿಲು ಮುಟ್ಟಿದೆ. ಮನೆಯಲ್ಲಿರುವ ದನಕರುಗಳು, ಎತ್ತುಗಳು, ಎಮ್ಮೆಗಳು, ಕುರಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಒಕ್ಕಲುತನ ಬೀದಿಪಾಲಾಗುತ್ತಿದೆ. ಕನಿಷ್ಟ ಸೌಜನ್ಯಕ್ಕಾದರೂ ಕರುಣೆ ತೋರದೆ, ಮಾನವೀಯತೆ ಇಲ್ಲದೆ ಇರುವುದು ತುಂಬಾ ದುಃಖಕರ ಸಂಗತಿಯಾಗಿದೆ. ಈಗಲಾದರು ಎಚ್ಚೆತ್ತುಕೊಂಡು ಸೊನ್ನ ಬ್ಯಾರೆಜ್‌ನಿಂದ ಘಾಣಗಾಪುರದವರೆಗೆ ಕುಡಿಯುವ ನೀರು ಬಿಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಏ. 6; ಪ್ರಣಾಳಿಕೆಯಲ್ಲಿ ಪರಿಸರಕ್ಕಾಗಿ ಆದ್ಯತೆ ನೀಡಲು ‘ಪರಿಸರ ಪ್ರಣಾಳಿಕೆ’ ಬಿಡುಗಡೆ
ಈ ಸಂದರ್ಭದಲ್ಲಿ ಸಿದ್ದರಾಮ ದಣ್ಣುರು, ರಮೇಶ್ ಹೂಗಾರ, ಅಶೋಕ ಹೂಗಾರ, ಶರಣಬಸಪ್ಪಾ ಮಮಶೆಟ್ಟಿ, ಬೊಜಪ್ಪಾ ಕೊಳ್ಳುರು, ಲಕ್ಷ್ಮಿ ಕಾಂತ ಕುಮುಸಗಿ, ಸಿಪ್ಪಣ್ಣ ಚಿಲ್ಕವಳಗಿ ಎಲ್ ಸೇರಿದಂತೆ ಇತರರು ಇದ್ದರು.
