ಜಮೀನು ವಿವಾದದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಚಟ್ಟನಪಾಳ್ಯ ಗ್ರಾಮದ ಶಿವಣ್ಣ ಎಂಬುವರ ಹೆಸರಿನಲ್ಲಿ 3/4 ಎಕರೆ ಅಡಿಕೆ ತೋಟವಿದ್ದು, ಅದರ ಪಹಣಿ ಮಾತ್ರ ಆತನ ಸಹೋದರನ ಹೆಸರಿನಲ್ಲಿತ್ತು. ಶಿವಣ್ಣ ಕುಟುಂಬ 1960ರಿಂದಲೂ ತೋಟದ ಫಸಲನ್ನು ಕೋಯ್ದು ಮಾರಾಟ ಮಾಡಿ, ಜೀವನ ನಡೆಸುತ್ತಿತ್ತು.
ಆದರೆ, ಖಾತೆ ಮತ್ತು ಪಹಣಿ ವಿಚಾರದಲ್ಲಿ ಶಿವಣ್ಣ ಮತ್ತು ಅವರ ಸಹೋದರನ ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು. ಜಗಳವು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆ ಬಳಿಕವೂ, ಜಗಳ ಮುಂದುವರೆದಿತ್ತು.
ಇತ್ತೀಚೆಗೆ, ಶಿವಣ್ಣನ ಕುಟುಂಬಸ್ಥರು ಅಡಿಕೆ ಕೊಯ್ಯುವಾಗ ತೋಟದಲ್ಲೇ ಎರಡು ಕುಟುಂಬದ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ, ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿದ್ದಾರೆ.
ಶಿವಣ್ಣನ ಸಹೋದರನ ಮಗ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾನೆ. ಶಿವಣ್ಣ ಕೂಡ ಕುಡುಗೋಲು ಹಿಡಿದು ಗಲಾಟೆ ಮಾಡಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.