ರಮಾಬಾಯಿಯವರ ತ್ಯಾಗದ ಫಲದಿಂದಲೇ ಬಾಬಾ ಸಾಹೇಬರು ಸಾಧನೆ ಮಾಡಲು ಸಾಧ್ಯವಾಯಿತು. ತಾನು ನೋವುಂಡು ಸಮಾಜದ ಏಳಿಗೆಗೆ ಶ್ರಮಿಸಿದ ತಾಯಿ ರಮಾಬಾಯಿ ಅಂಬೇಡ್ಕರ್ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್ ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಭೀಮ್ ಆರ್ಮಿ ಏಕತಾ ಮಿಷನ್ ಸಂಘಟನೆ ವತಿಯಿಂದ ಭಾನುವಾರ (ಫೆ.11) ಏರ್ಪಡಿಸಿದ್ದ ಮಾತೆ ರಮಾಬಾಯಿ ಅಂಬೇಡ್ಕರ್‌ರವರ 126ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಶ್ರೀಮಂತಿಕೆಯನ್ನು ತ್ಯಾಗ ಮಾಡಿ ಸಮಾಜದ ಏಳಿಗೆಯನ್ನು ಬಯಸಿದ ಮಹಿಳೆ ರಮಾಬಾಯಿ. ಅವರ ಬಾಬಾ ಸಾಹೇಬರಿಗೆ ಎಷ್ಟೆಲ್ಲ ಪ್ರೇರಣೆ ಮತ್ತು ಹಿಂದಿನ ಶಕ್ತಿಯಾಗಿದ್ದರು ಎಂಬುವುದನ್ನು ನಾವು ತಿಳಿದುಕೊಳ್ಳಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ರಮಾಬಾಯಿ ಅಂಬೇಡ್ಕರ್ ಅನುಭವಿಸಿದ ನೋವು ಹೇಳತೀರದು.
‘ಎಷ್ಟೇ ಕಷ್ಟ ಬಂದರೂ ಸಹ ತಾನೆಂದು ಬಾಬಾ ಸಾಹೇಬರಿಗೆ ತೋರಿಸಿಕೊಡಲಿಲ್ಲ. ಅಂಬೇಡ್ಕರ್ ಅವರು ಮಹಿಳೆಯರಿಗಾಗಿ ಮತ್ತು ದೇಶದ ಜನರ ನೋವುಗಳಿಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ರಮಾಬಾಯಿ ಅವರಿಗೆ ಇತ್ತು. ತನ್ನ ಮಗ ಸತ್ತಾಗಲೂ ಧೃತಿಗೆಡದೆ ಬಾಬಾ ಸಾಹೇಬರಿಗೆ ಪ್ರೇರಣೆಯಾದರು’ ಎಂದರು.
ಉಪನ್ಯಾಸಕ ರಾಹುಲ್ ಪಂಚಶೀಲ ಮಾತನಾಡಿ, “ಜೀವನದುದ್ದಕ್ಕೂ ಕಷ್ಟ ಅನುಭವಿಸಿದವರು ರಮಾಬಾಯಿಯಾಗಿದ್ದಾರೆ. ಜಗತ್ತು ನನ್ನನ್ನು ಗುರುತಿಸುತ್ತಿದೆ, ನಾನು ಇಷ್ಟೆಲ್ಲ ಸಾಧನೆ ಮಾಡಿದ್ದೇನೆ ಎಂದರೆ, ಅದಕ್ಕೆ ರಮಾಬಾಯಿ ಕಾರಣ ಎಂದು ಸ್ವತಃ ಬಾಬಾ ಸಾಹೇಬರೇ ಹೇಳಿಕೊಂಡಿದ್ದಾರೆ. ಜಗತ್ತಿನಲ್ಲಿ ಓದಿನ ಹಸಿವು ಇದ್ದಿದ್ದು ಡಾ.ಅಂಬೇಡ್ಕರ್ ಅವರಿಗೆ ಮಾತ್ರ. ಈ ಸಾಧನೆಗೆ ರಮಾಬಾಯಿಯವರ ಕೊಡುಗೆಯೂ ಇತ್ತು ಎಂಬುವುದು ಯಾರೂ ಮರೆಯಲು ಸಾಧ್ಯವಿಲ್ಲ” ಎಂದರು.
ಈ ಸಂದರ್ಭದಲ್ಲಿ ನಿಜಲಿಂಗ ದೊಡ್ಡಮನಿ, ಶ್ರೀನಾಥ ಮಿಂಚಿನ್, ಸುಭಾಷ ಹೊಸ್ಮನಿ, ಭರತ್, ಶಾರದಾ ಬೂದಿಹಾಳ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಸೂರ್ಯಕಾಂತ ಜಿಡಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಂಗರಗಿ, ಕಾರ್ಯದರ್ಶಿ ಸುಧೀರ ಹೊನ್ನಳ್ಳಿ, ತಾಲೂಕು ಅಧ್ಯಕ್ಷ ಸುಭಾಷ ಆಲೂರ, ಗೌರವಾಧ್ಯಕ್ಷ ಸಿದ್ದು ಮುದವಾಳ, ನಗರಾಧ್ಯಕ್ಷ ಬಸವರಾಜ ಇಂಗಳಗಿ, ಪ್ರ.ಕಾರ್ಯದರ್ಶಿ ಸಿದ್ದು ಹುಲ್ಲೂರ, ಮಿಲಿಂದ ಸಾಗರ, ಭೀಮಾಶಂಕರ ಬಿಲ್ಲಾಡ, ಗೀತಾ, ಪರಮೇಶ ಬಿರಾಳ, ಶಿವುಗೌಡ ಬಿರಾದಾರ, ಮರೆಪ್ಪ ಸೇರಿದಂತೆ ಇತರರು ಇದ್ದರು.