ಇಂದಿನ ವಿದ್ಯಾರ್ಥಿಗಳು ಸಿನಿಮಾ ಹಾಗೂ ಕ್ರಿಕೆಟ್ ತಾರೆಯರನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಳ್ಳದೆ ಭಗತ್ ಸಿಂಗ್‌ರವರಂತಹ ಕ್ರಾಂತಿಕಾರಿಗಳನ್ನು ಆದರ್ಶವನ್ನಾಗಿ ತೆಗೆದುಕೊಳ್ಳಬೇಕು ಹಾಗೂ ಸಾಮಾಜಿಕ ಹೋರಾಟಕ್ಕೆ ಕಾಣಿಕೆಯನ್ನು ನೀಡಬೇಕು ಎಂದು ಹಿರಿಯ ಪತ್ರಕರ್ತರಾದ ಪ್ರಭಾಕರ್ ಜೋಶಿ ಹೇಳಿದರು.
ಕಲಬುರಗಿಯಲ್ಲಿ ಧೀರ ಹುತಾತ್ಮ ಭಗತ್ ಸಿಂಗ್‌ರವರ 94ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್‌ಒ, ಎಐಡಿವಾಯ್‌ಒ, ಎಐಎಂಎಸ್‌ಎಸ್ ಸಂಘಟನೆಗಳು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಶಿವಗಂಗಾರುಮ್ಮ ರವರು ಮಾತನಾಡುತ್ತ, ಭಗತ್ ಸಿಂಗ್‌ರವರು ತಮ್ಮ ಚಿಕ್ಕವಯಸ್ಸಿನಿಂದಲೇ ವೈಚಾರಿಕ ಸ್ಪಷ್ಟತೆಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅವರು ಎತ್ತಿ ಹಿಡಿದ ಸಮಾಜವಾದಿ ಭಾರತದ ಕನಸನ್ನು ಜನಮಾನಸದಲ್ಲಿ ಮೂಡಿಸಲು ಪ್ರಯತ್ನಿಸಿದರು. ಅವರು ಜೈಲಿನಲ್ಲಿ ಬರೆದಂತಹ ‘ನಾನೇಕೆ ನಾಸ್ತಿಕ’ ಎಂಬ ಗ್ರಂಥದಲ್ಲಿ ತೀಕ್ಷ್ಣವಾದ ವೈಚಾರಿಕ ತಳಹದಿಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದರು.
ಹೇಗೆ ಮಾನವನಿಂದ ಮಾನವನ ಶೋಷಣೆಯನ್ನು ತಡೆಗಟ್ಟಲು ನಾವು ಶ್ರಮಿಸಬೇಕು, ಹಳೆ ವಿಚಾರ ಸಂಪ್ರದಾಯಗಳನ್ನು ಮುರಿದು ವೈಜ್ಞಾನಿಕ ಆಲೋಚನಾ ತಳಹದಿಯನ್ನು ಪಡೆದುಕೊಳ್ಳಬೇಕು ಎಂಬ ತಮ್ಮ ಹರಿತವಾದ ಬರಹದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ತುಂಬಾ ಗಾಢವಾದ ಪರಿಣಾಮವನ್ನು ಬೀರಿದ್ದಾರೆ. ಇಂದಿನ ಯುವಜನರು ಅವರ ‘ನಾನೇಕೆ ನಾಸ್ತಿಕ’ ಎಂಬ ಗ್ರಂಥವನ್ನು ತಪ್ಪದೆ ಓದಿ ಯುವಜನರು ವೈಚಾರಿಕವಾಗಿ ರಾಜಕೀಯವಾಗಿ ಪ್ರಭುದ್ಧರಾಗಬೇಕೆಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮಕ್ಕೆ ಭಾಷಣಕಾರರಾಗಿ ಎಐಡಿವೈಒನ ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಎಸ್.ಎಚ್‌ರವರು ಆಗಮಿಸಿ ಮಾತನಾಡಿದರು ಹಾಗೂ ಪ್ರಾಸ್ತವಿಕವಾಗಿ ಎಐಡಿ ಎಸ್‌ಓ ಜಿಲ್ಲಾ ಕಾರ್ಯದರ್ಶಿಗಳಾದ, ತುಳಜಾರಾಮ್ ಏನ್.ಕೆ ರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಎಂಎಸ್‌ಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಗುಂಡಮ್ಮ ಮಡಿವಾಳರವರು ವಹಿಸಿದ್ದರು.
ಕಲಬುರಗಿ ಜಿಲ್ಲೆಯ ಹಲವು ಭಾಗಗಳಿಂದ ವಿದ್ಯಾರ್ಥಿಗಳು ಯುವಜನತೆ ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದಾದ ನಂತರ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಬಂದಿರುವ ಕಲಾವಿದರಿಂದ ನಾಟಕ, ಡೊಳ್ಳಿನ ಕುಣಿತ, ಲಾವಣಿ, ಗುಂಪು ಗಾಯನ ಇಂತಹ ಸಂಸ್ಕೃತಿಕ ಚಟುವಟಿಕೆಗಳು ಜರುಗಿದವು. ನೂರಾರು ಸಂಖ್ಯೆಯಲ್ಲಿ ಸೇರಿರುವ ಸಭಿಕರು ಇದ್ದರು.
