ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮಗು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಳ್ಳೂರಿಗಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ. ಅವರೆಲ್ಲರೂ ಬೆಂಗಳೂರು ಮೂಲದವರು ಎಂದು ಹೇಳಲಾಗಿದೆ.
ಅಪಘಾತ ಸ್ಥಳದಲ್ಲಿ ಮೃತರ ಆಧಾರ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ಅವರೆಲ್ಲರ ವಿಳಾಸ ಬೆಂಗಳೂರು ಎಂದು ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ದುಧನಿ ಕಡೆಯಿಂದ ಅಫಜಲಪುರದ ಕಡೆಗೆ ದಂಪತಿ, ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದರು. ಇದೇ ವೇಳೆ, ಅಫಜಲಪುರದಿಂದ ದುಧನಿಯತ್ತ ತೆರಳುತ್ತಿದ್ದ ಲಾರಿಯೊಂದು ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಲಾರಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.