ಈರುಳ್ಳಿ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಪ್ರಸ್ತುತ ದೇಶದಲ್ಲಿ ಕೆಲವು ಕಡೆ ಅಕಾಲಿಕ ಮಳೆಯಿಂದಾಗಿ ಹಾಗೂ ಕೆಲವು ಕಡೆ ಬರಗಾಲದ ಕಾರಣಕ್ಕಾಗಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧಿಸಿದೆ. ಆದರೆ, ಇದೇ ಸಂದರ್ಭದಲ್ಲಿ ರೈತರಿಗೆ ಬೆಲೆ ಹೆಚ್ಚಳದ ಲಾಭ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಬೆಳೆದ ಈರುಳ್ಳಿ ಮಾರುಕಟ್ಟೆಗೆ ಬರುವ ಸಮಯದಲ್ಲಿಯೇ ರಫ್ತು ನಿಷೇಧಿಸಿದ್ದರಿಂದ ರೈತರಿಗೆ ಸಗಟು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಉತ್ತಮ ಬೆಲೆ ಕೂಡ ಸಿಗದೇ, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಹಾಯಕ್ಕಾಗಿ ವೈಜ್ಞಾನಿಕ ರೀತಿಯಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕೆಂದು ಅಖಿಲ ಭಾರತ ಕಿಸಾನ ಸಭಾ ಆಗ್ರಹಿಸಿದೆ.
ಸಗಟು ಮಾರುಕಟ್ಟೆಯಲ್ಲಿ ದೇಶದ ಕೆಲವೇ ಕೆಲವು ಮಾಲ್‌ಗಳ ಮಾಲೀಕರು ಈರುಳ್ಳಿಯನ್ನು ಬೆಳೆದ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಮುಕ್ತ ಮಾರುಕಟ್ಟೆಗೆ ಬಿಡದೇ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯೂ ಹೆಚ್ಚಾಗಿದ್ದು ಜನಸಾಮಾನ್ಯರ ಹಿತದೃಷ್ಟಿಯಿಂದ ರಫ್ತು ನಿಷೇಧ ಮಾಡಿದ ಉದ್ದೇಶ ಈಡೇರದೇ ಮಾಲ್‌ಗಳ ಮಾಲೀಕರಿಗೆ ಮಾತ್ರ ಲಾಭವಾಗುತ್ತಿದ್ದು, ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿಕೊಳ್ಳುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಡಾ. ಸ್ವಾಮಿನಾಥನ್ ವರದಿಯ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ಘೋಸಿಸಬೇಕೆಂದು ಆಗ್ರಹಿದ್ದಾರೆ.
ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಮೈಲಾರಿ ಜೋಗೆ, ಮಹಮ್ಮದ್ ರಫಿ, ರುದ್ರವಾಡಿ, ಭೀಮಾಶಂಕರ ಮಾಡಿಯಾಳ, ಸಾಜಿದ ಅಹ್ಮದ ದಿಗ್ಗಾಂವಕರ, ಹಣಮಂತ ಪಡೆರ, ಪದ್ಮಾಕರ ಜಾನಿಬ, ಕಲ್ಯಾಣಿ ಅವಟೆ, ಗಣಜಲಖೇಡ್ ಇತರರು ಉಪಸ್ಥಿತರಿದ್ದರು.