ನವೆಂಬರ್ 17 ರಂದು ಕೆಪಿಎಸ್ಸಿ ನಡೆಸಿದ್ದ ಕಲ್ಯಾಣ ಕರ್ನಾಟಕ ವೃಂದದ ಪಿಡಿಒ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಕೂಡಲೇ ಮರುಪರೀಕ್ಷೆ ನಡೆಸಬೇಕೆಂದು ಎಸ್‌ಎಫ್‌ಐ ನೇತ್ರತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಎಸ್‌ಎಫ್‌ಐ ಸೇರಿದಂತೆ ಇತರೆ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ಮಾತನಾಡಿ, ʼನ.17ರಂದು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ನಡೆಸಿದ್ದ ಪಿಡಿಒ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ರಾಯಚೂರಿನ ಪರೀಕ್ಷೆ ಕೇಂದ್ರವೊಂದರಲ್ಲಿ ಇದ್ದ 24 ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ಕೊಟ್ಟಿದ್ದು, ಉಳಿದ 12 ಅಭ್ಯರ್ಥಿಗಳಿಗೆ ಒಂದು ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ತನಿಖೆ ನಡೆಸದೆ, ಪ್ರತಿಯಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ʼನೇಮಕಾತಿ ಪರೀಕ್ಷೆಗೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮವಾಗಿ ನೂರಾರು ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ. ಈ ಪಿಡಿಒ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಕುರಿತು ಸೂಕ್ತ ತನಿಖೆಯಾಗಬೇಕು, ಮರುಪರೀಕ್ಷೆ ಮಾಡಬೇಕು. ಅಕ್ರಮ ಎಸಗಿದ ತಪ್ಪಿಸ್ಥರನ್ನು ಅಮಾನತುಗೊಳಿಸಿ ಬಂಧಿಸಬೇಕು. ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ವಿರುದ್ಧ ದಾಖಲಿಸಿದ್ದ ಪ್ರಕರಣ ಕೂಡಲೇ ರದ್ದುಗೊಳಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಪ್ರಮುಖರಾದ ಮೇಘಾ, ಲವಿತ್ರಾ, ಪ್ರೇಮ್, ಭರತ್, ನಾಗಮ್ಮ, ಹುಲಿಗಮ್ಮ, ಮಾಲಾಶ್ರೀ ಸೇರಿದಂತೆ ಮತ್ತಿತರರು ಇದ್ದರು.