ಕಲಬುರಗಿಯಲ್ಲಿ ಕಳೆದ ಜನವರಿ 23ರಂದು ನಡೆದ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ (ಎಸ್‌ಸಿ/ಎಸ್‌ಟಿ) ತಿರಸ್ಕರಿಸಿದೆ.
ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದು, ಮೂರ್ತಿಯ ಬಳಿ ಒಳ ಉಡುಪುಗಳನ್ನು ಎಸೆದಿರುತ್ತಾರೆ. ಜತೆಗೆ ಒಂದು ಹಾಳೆಯಲ್ಲಿ ಕೆಲವರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರು. ಹಣದ ಆಸೆಗಾಗಿ ಕೃತ್ಯ ಎಸಗಿರುವುದಾಗಿ ಚೀಟಿಯಲ್ಲಿ ಬರೆದಿದ್ದರು.
ಚೀಟಿಯಲ್ಲಿದ್ದ ಹೆಸರುಗಳ ಆಧಾರದ ಮೇಲೆ ವಿಶ್ವವಿದ್ಯಾಲಯ ಪೋಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಎಸಿಪಿ ಸಬ್ ಅರ್ಬನ್ ಉಪ ವಿಭಾಗ ಡಿ ಜಿ ರಾಜಣ್ಣ ಅವರು ಪ್ರಕರಣ ನೋಂದಾಯಿಸಿಕೊಂಡು ತನಿಖೆ ಕೈಗೊಂಡು ಆರೋಪಿತರನ್ನು ದಸ್ತಗಿರಿ ಮಾಡಿದ್ದರು.
ಪ್ರಕರಣದ ಆರೋಪಿಗಳಾದ ಸಂಗಮೇಶ ಸುಭಾಷ ಪಾಟೀಲ್, ಕಿರಣ, ಹಣಮಂತ, ಮಾನು, ಶಿವಾಜಿನಗರ ಪಾಣೇಗಾಂವ್ ಎಂಬಾತರು ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ (ಎಸ್‌ಸಿ/ಎಸ್‌ಟಿ)ದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದದರು. ನ್ಯಾಯಾಲಯವು ಆರೋಪಿತರು ಹಾಗೂ ಪಿರ್ಯಾದುದಾರರ ವಾದ-ವಿವಾದಗಳನ್ನು ಆಲಿಸಿದ ಬಳಿಕ ಆರೋಪಿತರು ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜತೆಗೆ ಪ್ರಕರಣವು ಇನ್ನೂ ತನಿಖಾ ಹಂತದಲ್ಲಿದ್ದ ಕಾರಣ ಆರೋಪಿತರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಐತಿಹಾಸಿಕ ಬಾವಿ ಪುನರುಜ್ಜೀವನ ಅಭಿಯಾನಕ್ಕೆ ಚಾಲನೆ
ಕಲಬುರಗಿ ಜಿಲ್ಲಾ ನ್ಯಾಯಾಲಯದ ಖ್ಯಾತ ವಕೀಲ ಲಿಂಗರಾಜ್ ಎಂ ಜಿ ಅವರು ದೂರುದಾರರ ಪರವಾಗಿ ವಾದ ಮಂಡಿಸಿದ್ದು, ರಾಷ್ಟ್ರನಾಯಕ ಬಾಬಾಸಾಹೇಬರ ಮೂರ್ತಿಗೆ ಅಪಮಾನವೆಸಗಿದ ಕಿಡಿಗೇಡಿಗಳ ಜಾಮೀನು ಅರ್ಜಿ ರದ್ದಾಗಲು ಶ್ರಮಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಭಾರಿ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದರ ಜಿ ಅವರು ವಾದವನ್ನು ಮಂಡಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ಅನುಯಾಯಿಗಳು, ಕಲಬುರಗಿ ಜಿಲ್ಲಾ ವಕೀಲರ ಸಂಘ, ಕಲಬುರಗಿ ಜಿಲ್ಲಾ ಎಸ್‌ಸಿ/ಎಸ್‌ಟಿ ವಕೀಲರ ಸಂಘದ ಸಹಕಾರವು ಇರುತ್ತದೆ ಎಂದು ಅಶ್ವಿನಿ ಮದನಕರ್, ಆರತಿ ರಾಠೋಡ್, ಶ್ರೀ ರಮೇಶ ರಾಗಿ, ಧರ್ಮಣ್ಣ ಕೋನೆಕರ್, ವಿಜಯಕಾಂತ್ ರಾಗಿ, ಜಗನ್ನಾತ್ ಮಾಳಗೆ, ಮಲ್ಲಿಕಾರ್ಜುನ, ಜೆಡಿಆರ್ ಹಣಮಂತ ಬಾವಿಕಟ್ಟಿ ಒಗ್ಗೂಡಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.