ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವು ಪ್ರತಿನಿತ್ಯ ಮೆಲುಕು ಹಾಕುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಮ್ಮೊಳಗೊಂದು ಶಕ್ತಿ ತಯಾರಾಗುತ್ತದೆ ಎಂದು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ಚಿಂಚೋಳಿ ಪಟ್ಟಣದ ಬಿಸಿಎಂ ಕಾಲೇಜು ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ರಾಷ್ಟ್ರೀಯ ಮೂಲನಿವಾಸಿ ಕೂಲಿ ಕಬ್ಬಲಿಗ ಯುವ ಸಂಘಟನೆ ವತಿಯಿಂದ
ಡಾ.ಬಿ.ಆರ್ ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ದೃಷ್ಟಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆ ಜೊತೆಗೆ ಮಹಾತ್ಮರ, ಶರಣರ, ಸಂತರ ವಿಚಾರಗಳನ್ನು ಅರಿತು ನಡೆದರೆ ಬಾಳು ಸಾರ್ಥಕವಾಗುತ್ತದೆ” ಎಂದರು.
ಮುಖ್ಯ ಅತಿಥಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ್ ಮಾತನಾಡಿ, “ಭಾರತ ರಾಷ್ಟ್ರವಲ್ಲದೆ ಬಹುತೇಕ ರಾಷ್ಟ್ರಗಳು ತಮ್ಮ ರಾಷ್ಟ್ರದ ಧ್ವಜವನ್ನು ಅರ್ಧಕ್ಕೆ ಇಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವುದನ್ನು ನೋಡಿದರೆ ಅಂಬೇಡ್ಕರ್ ಅವರಲ್ಲಿರುವ ಪಾಂಡಿತ್ಯ ಎಂತಹದ್ದೆಂದು ನಾವು ತಿಳಿದುಕೊಳ್ಳಬೇಕಾಗಿದೆ” ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಳಗಿಯ ಹಿರಿಯ ಉಪನ್ಯಾಸಕ ಪ್ರೊ ಸುಭಾಷ್ ಶೀಲವಂತ ಅವರು ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | 5 ವರ್ಷದಲ್ಲಿ ವಸತಿ ಶಾಲೆಗಳ 92 ಮಂದಿ ವಿದ್ಯಾರ್ಥಿಗಳ ಆತ್ಮಹತ್ಯೆ
ಮುಖ್ಯ ಅತಿಥಿ ಈಡಿಗ ಸಮಾಜದ ಅಧ್ಯಕ್ಷ ಚಂದ್ರಶೇಖರ ಗುತ್ತೆದಾರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಂಜೀವಕುಮಾರ್ ಪಾಟೀಲ್, ಕೂಲಿ ಸಮಾಜದ ಮುಖಂಡ ಶರಣು ನಾಟಿಕಾರ, ಅನುಸೂಯ ಚೌವ್ಹಾಣ್, ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ಮೋಹನ ಐನಾಪೂರ, ಹರ್ಷವರ್ಧನ, ದೀಪಾ, ವಿಜಯಲಕ್ಷ್ಮಿ, ಸಾಗರ, ವಿಜಯ ಸೇರಿದಂತೆ ಇತರರು ಇದ್ದರು.
ವರದಿ: ಸಿಟಿಜ಼ನ್ ಜರ್ನಲಿಸ್ಟ್ ಮಾರುತಿ