ಅಲ್ಟ್ರಾಟೆಕ್ ಸಿಮೆಂಟ್ ಆದಿತ್ಯ ನಗರ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು 5ನೇ ಘಟಕವನ್ನು ಪ್ರಾರಂಭ ಮಾಡುವುದನ್ನು ರದ್ದುಗೊಳಿಸಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷ, ಸೇಡಂನ ಉಪ ವಿಭಾಗ ಕಾರ್ಯಾಲಯದ ಸಹಾಯಕ ಆಯುಕ್ತರ ಮುಖಾಂತರ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯವರು ವಿಷಪೂರಿತ ರಸಾಯನಿಕ ಅನಿಲವನ್ನು ನೇರವಾಗಿ ಕಾಗಿಣಾ ನದಿಗೆ ಬಿಡುತ್ತಿರುವುದರಿಂದ, ಮಳಖೇಡ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಪರಿಸರ ಮಾಲಿನ್ಯವನ್ನು ಹಾಳು ಮಾಡುತ್ತಿದ್ದು ಮತ್ತು ಫಲವತ್ತಾದ ಜಮೀನಿನ ಬೆಳೆಗಳ ಮೇಲೆ ಬ್ಲಾಸ್ಟಿಂಗ್ ದಿಂದ ಧೂಳು ಬೆಳೆಗಳ ಮೇಲೆ ಬಿದ್ದು, ಬೆಳೆ ಹಾಳಾಗುತ್ತಿದೆ. ಗ್ರಾಮಸ್ಥರು ಹಾಗೂ ರೈತರು ಕಾರ್ಖಾನೆಯವರು ಬಿಟ್ಟ ವಿಷಪೂರಿತ ನೀರನ್ನು ಕುಡಿದು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಪ್ರಾಣಿಗಳು ಕೂಡಾ ವಿಷಪೂರಿತ ನೀರಿಗೆ ಬಲಿಯಾಗುತ್ತಿವೆ.
ಆದರೂ ಸಿಮೆಂಟ್ ಕಾರ್ಖಾನೆಯವರು ಪುನಃ 5ನೇ ಘಟಕವನ್ನು ಸ್ಥಾಪನೆ ಮಾಡುವ ವಿಷಯ ತಿಳಿದು ಬಂದಿರುತ್ತದೆ. ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಜೀವ ಹಾನಿ ಹಾಗೂ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಸಿಮೆಂಟ್ ಕಾರ್ಖಾನೆಯ 5ನೇ ಘಟಕವನ್ನು ಪ್ರಾರಂಭಿಸಲು ಬಹುಜನ ಸಮಾಜ ಪಕ್ಷ ಸೇಡಂ ಘಟಕಖಂಡಿಸುತ್ತದೆ. ಆದಕಾರಣ ಅದನ್ನು ರದ್ದುಪಡಿಸಿ, ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರ ಮುಂದಿನ ದಿನಗಳಲ್ಲಿ ಕಾರ್ಖಾನೆ ವಿರುದ್ಧ ಮುಷ್ಕರ ಕೈಗೊಳ್ಳಲಾಗುವುದು ಎಂದು ರೇವಣಸಿದ್ದಪ್ಪ, ಎಸ್.ಸಿಂಧೆ, ಬಿಎಸ್‌ಪಿ ಅಧ್ಯಕ್ಷರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.