ಕಲಬುರಗಿ ನಗರದ ದಕ್ಷಿಣ ಕ್ಷೇತ್ರದ ಬಡಾವಣೆ ಬಾಪುನಗರದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ ಕಂಡುಬರುತ್ತವೆ. ಆದರೂ, ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಸ ಸಂಗ್ರಹಕ್ಕಾಗಿ ಅಪರೂಪಕ್ಕೆ ಪಾಲಿಕೆಯ ವಾಹ ಬರುತ್ತದೆ. ಬಡಾವಣೆಯಲ್ಲಿ ಒಳಚರಂಡಿ ಕಸ ತೆಗೆದು ರಸ್ತೆ ಬದಿಯಲ್ಲಿ ರಾಶಿ ಹಾಕಿ ಸುಮಾರು ದಿನಗಳೇ ಕಳೆದಿವೆ. ಆದರೂ, ಪಾಲಿಕೆ ಸಿಬ್ಬಂದಿಯಾಗಲೀ, ವಾಹನವಾಗಲೀ ಇತ್ತ ಸುಳಿದಿಲ್ಲ. ಕಸ ಕೊಂಡೊಯ್ದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.
ಸಮಸ್ಯೆಯ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರಾದ ಮುರಳಿಧರ್ ಉಪಾಧ್ಯಯ, “ಬಡಾವಣೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಪದೇ-ಪದೇ ದೂರು ನೀಡಿದರೂ ಪಾಲಿಕೆ ಅವರು ಇತ್ತ ಸುಳಿಯುತ್ತಿಲ್ಲ. ಚರಂಡಿ ತುಂಬಿ, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಗಬ್ಬು ನಾರುತ್ತದೆ. ಮನೆ ಒಳಗೂ ಕುಳಿತು ಊಟ ಮಾಡಲು ಆಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪುಟ್ಟ ಮಕ್ಕಳಿದ್ದಾರೆ. ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆ ಸೊಳ್ಳೆಗಳಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಭಯವಿದೆ. ಮಲೆರಿಯಾ, ಡೆಂಘಿಯಂತಹ ರೋಗಗಳು ಹರಿಡಿದರೆ ಹೊಣೆಯಾರು” ಎಂದು ಆಂತಕ ವ್ಯಕ್ತಪಡಿಸಿದ್ದಾರೆ.
“ಬಾಪುನಗರದಲ್ಲಿ ಹಿಂದುಳಿದ ವರ್ಗದವರೇ ಜಾಸ್ತಿ ವಾಸವಾಗಿದ್ದಾರೆ. ನಮ್ಮ ಬಗ್ಗೆ ಜನಪ್ರತಿನಿಧಿ, ಅಧಿಕಾರಿಗಳು ಬೇಜವಾಬ್ದಾರಿ ತೋರಿಸುತ್ತಾರೆ” ಎಂದು ಆರೋಪಿಸಿದ್ದಾರೆ.
ಬಾಪುನಗರ ನಿವಾಸಿ ಅನುರಾಧ ಮಾತನಾಡಿ, “ಹತ್ತು ಇಪ್ಪತ್ತು ದಿನಗಳು ಕಳೆದರು ಕಸ ತೆಗೆದುಕೊಂಡು ಹೋಗುವುದಕ್ಕೆ ಪಾಲಿಕೆ ಸಿಬ್ಬಂದಿ ಬರುವುದಿಲ್ಲ. ನಾವು ಕಲಬುರಗಿ ನಗರದಲ್ಲಿಯೇ ಇದ್ದರೂ, ನಮಗೆ ಕುಡಿಯುವ ನೀರಿನ ಪೂರೈಕೆ ಇಲ್ಲ. ಜಿಲ್ಲಾಸ್ಪತ್ರೆಯಿಂದ ಪೈಪ್ ಹಾಕಿಕೊಂಡು ನೀರು ಪಡೆಯುತ್ತೇವೆ. ಕೆಲವೊಮ್ಮೆ ಅಲ್ಲಿಯೂ ನೀರು ಸಿಗುವುದಿಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಿವಾಸಿ ಕರಣ್ ಮಾತನಾಡಿ, “ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯ ಸುತ್ತಲೂ ಕೂಡ ಸ್ವಚ್ಛತ್ತೆ ಇಲ್ಲ. ಶಾಲೆಗೆ ಮಕ್ಕಳು ಹೋಗುವುದೇ ಕಷ್ಟವಾಗಿದೆ. ಮಳೆ ಬಂದರೆ ಚರಂಡಿ ತುಂಬಿ ಮನೆ ಅಂಗಳಕ್ಕೆ ನೀರು ನುಗ್ಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.