ಸಂಸದರಾದ ಮೇಲೆ ಇಷ್ಟು ದಿನ ಎಲ್ಲಿಗೆ ಹೋಗಿದ್ರಿ. ವಿಧಾನಸಭಾ ಚುನಾವಣೆಯ ಸಮಯದಲ್ಲೂ ಕ್ಷೇತ್ರಕ್ಕೆ ಬರಲಿಲ್ಲ. ಈಗ ಬಂದಿದ್ದೀರಾ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ನಗರದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಉಮೇಶ್ ಜಾಧವ್ ಅವರನ್ನು ಬಿಜೆಪಿ ಕಾರ್ಯಕರ್ತರೇ ತರಾಟೆಗೆ ತೆಗೆದುಕೊಂಡಿದ್ದಾರೆ. ವೇದಿಕೆಯಲ್ಲಿದ್ದ ಇತರರನ್ನು ಕಾರ್ಯಕರ್ತರನ್ನು ತಡೆದು, ಸಮಾಧಾನ ಮಾಡಿದ್ದಾರೆ.
ಸಭೆಯಲ್ಲಿ ಮಾತಾಡಿದ ಜಾಧವ್, “ನನ್ನ ಗೆಲುವಿಗೆ ಎಂಎಲ್‌ಸಿ ಎನ್ ರವಿಕುಮಾರ್ ಅವರ ಶ್ರಮ ಕಾರಣ. ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ದುಡಿದಿದ್ದಾರೆ” ಎಂದು ಹೇಳಿದ್ದಾರೆ.
ಅವರ ಮಾತಿನಿಂದ ಸಿಡಿಮಿಡಿಗೊಂಡ ಪಕ್ಷದ ಹಿರಿಯ ಕಾರ್ಯಕರ್ತರು, “ನಾವ್ಯಾರು ನಿಮ್ಮ ಪರವಾಗಿ ಕೆಲಸ ಮಾಡಿಲ್ವಾ? ಮತ ಹಾಕಿಲ್ವಾ? ಒಬ್ಬರನ್ನು ಓಲೈಕೆ ಮಾಡಲು ಬಂದಿದ್ದೀರಾ? ಇಷ್ಟು ದಿನ ಎಲ್ಲಿಗೆ ಹೋಗಿದ್ರಿ?” ಎಂದು ಗಲಾಟೆ ಮಾಡಿದ್ದಾರೆ.
ಗಲಾಟೆ ವೇಳೆ ಮಧ್ಯಪ್ರವೇಶಿಸಿದ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದು, “ಸಂಸದರ ಭಾಷಣದ ವೇಳೆ ಹೀಗೆ ವರ್ತಿಸಬಾರದು. ಬಿಜೆಪಿಯ ಶಿಸ್ತನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಗದ್ದಲ ನಿಂತ ಬಳಿಕ ಮಾತನಾಡಿದ ಎಂಎಲ್‌ಸಿ ರವಿಕುಮಾರ್, “ಸಂಸದರ ಗೆಲುವಿಗೆ ಎಲ್ಲ ಕಾರ್ಯಕರ್ತರ ಶ್ರಮವಿದೆ. ಅವರ ಗೆಲುವು ಎಲ್ಲ ಕಾರ್ಯಕರ್ತರ ಗೆಲುವು” ಎಂದು ಹೇಳಿದ್ದಾರೆ.