ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಒಡಿಸ್ಸಾ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಾಧ್ಯಾಪಕರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಮುಖಂಡ ಡಾ. ನಂದಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ದಲಿತ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದಕ್ಕೆ ಅನೇಕ ಜೀವಂತ ಸಾಕ್ಷ್ಯಗಳೂ ಇವೆ. ನಿನ್ನೆ ಜಯಶ್ರೀ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಸಂಗತಿ ವಿಶ್ವವಿದ್ಯಾಲಯದ ಸ್ಥಿತಿ-ಗತಿಯ ಬಗ್ಗೆ ಮತ್ತಷ್ಟೂ ಆತಂಕ ಹುಟ್ಟಿಸುತ್ತಿದೆ. ಇದೆಲ್ಲದರ ಕುರಿತು ವಿಚಾರ ಮಾಡಬೇಕಾದ ಸಂದರ್ಭ ಇದಾಗಿದೆ”
“ಈ ಹಿಂದೆ ಇದೆ ವಿಶ್ವವಿದ್ಯಾಲಯದ ಆರ್ ಎಸ್ ಎಸ್ ಹಿನ್ನಲೆಯ ಪ್ರಾಧ್ಯಾಪಕ ಮಲ್ಲಿಕಾರ್ಜುನ ಹೂಗಾರ ಅವರು ವಿಶ್ವವಿದ್ಯಾಲಯದ ಒಳಗಡೆ ನಂದಿನಿ ಹಾಲಿನ ಉತ್ಪನ್ನಗಳ ಅಂಗಡಿ ನಡೆಸುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಈ ಬಗ್ಗೆ ವಿದ್ಯಾರ್ಥಿನಿಯರು ಕುಲಪತಿಗಳಿಗೆ ಮತ್ತು ಕುಲಸಚಿವರಿಗೆ ಹಾಗೂ ವಿದ್ಯಾರ್ಥಿಗಳ ಡೀನ್ ಡಾ. ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನೂ ನೀಡಿದ್ದರು. ಆದರೆ, ಈ ಎಲ್ಲ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಆರೋಪಿತನ ಅಣ್ಣನಾದ ಡಾ. ಮಲ್ಲಿಕಾರ್ಜುನ ಹೂಗಾರ ಒಳಗೊಂಡು ಆ ವಿದ್ಯಾರ್ಥಿಗಳನಿಯರನ್ನು ಆಫೀಸ್ ಚೇಂಬರ್ ಗೆ ಕರೆಸಿ ಸಂಧಾನ ಮಾಡಿಸಿದ್ದರು.
ಸಂಧಾನಗಳ ಕಾರಣದಿಂದ ಮತ್ತೊಮ್ಮೆ ವಿಶ್ವವಿದ್ಯಾಲಯದ ಕ್ಯಾಂಟೀನ್ ಗುತ್ತಿಗೆ ಪಡೆದ ತೆಲಂಗಾಣ ಮೂಲದ ಬಿಜೆಪಿ ನಾಯಕ ದಲಿತ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿರುವ ಕುರಿತು ಸ್ವತಃ ವಿದ್ಯಾರ್ಥಿನಿ ಮೇಲ್ ಮುಖಾಂತರ ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನು ನೀಡಿದ್ದಳು”
ಈ ಪ್ರಕರಣದಲ್ಲಿಯೂ ಹಿಂದೆ ನಡೆಸಿದ ಸಂಧಾನದ ರೀತಿಯಲ್ಲಿ ಸಂಧಾನ ನಡೆಸಿ ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿತು. ಹೀಗಾಗಿಯೇ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ, ಮುಖ್ಯವಾಗಿ ವಿದ್ಯಾರ್ಥಿಗಳ ಡೀನ್ ಅವರು ದಲಿತ ವಿದ್ಯಾರ್ಥಿಳಿಗೆ ಆದಂತಹ ಅನ್ಯಾಯವನ್ನು ನಿರ್ಲಕ್ಷಿಸಿ ಆರೋಪಿಗಳ ಪರ ವಕಾಲತ್ತು ವಹಿಸಿರುವ ಸಂಗತಿ ನಮ್ಮ ಮುಂದಿರುವ ವಾಸ್ತವಾಗಿದೆ. ಹಾಗಾಗಿ ಈಗ ಆತ್ಮಹತ್ಯೆಗೆ ಶರಣಾಗಿರುವ ದಲಿತ ವಿದ್ಯಾರ್ಥಿನಿ ಕೂಡ ಇದೆ ಬಸವರಾಜ ಕುಬಕಡ್ಡಿ ಜೊತೆ ಮಾತನಾಡಿದ ತರುವಾಯ ನೇಣಿಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ವಿದ್ಯಾರ್ಥಿನಿಯು ಅವರನ್ನು ಯಾವ ಸ್ಥಿತಿಯಲ್ಲಿ ಭೇಟಿ ಮಾಡಿದ್ದಾಳೆ? ಯಾವ ಸಂಗತಿಗಳನ್ನು ಅವರೊಟ್ಟಿಗೆ ಚರ್ಚೆ ಮಾಡಿದ್ದಾಳೆ? ಆ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸುವಷ್ಟು ಸಾಮಾನ್ಯ ತಿಳಿವಳಿಕೆ ಆ ಪ್ರಾಧ್ಯಾಪಕರಿಗೆ ಇರಲಿಲ್ವೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ | ರಸ್ತೆ ಗುಂಡಿ ಮುಚ್ಚಲು ಜಯ ಕರ್ನಾಟಕ ಸಂಘಟನೆ ಆಗ್ರಹ
“ವಿದ್ಯಾರ್ಥಿನಿಯೊಟ್ಟಿಗೆ ಮಾತನಾಡಿದ ತರುವಾಯದಲ್ಲಿ ವಸತಿ ಪಾಲಕರಿಗೆ ಅಥವಾ ವಿಭಾಗದ ಮುಖ್ಯಸ್ಥರಿಗೆ ಇಲ್ಲ ಅವರ ಸಹಪಾಠಿಗಳಿಗೆ ಅವರುಗಳಿಗೆ ಅವಳಿರುವ ಸ್ಥಿತಿ ತಿಳಿಸಿ ಜಾಗ್ರತೆ ವಹಿಸಬಹುದಿತ್ತು. ಆದರೆ ಇದ್ಯಾವುದನ್ನು ಬಸವರಾಜ ಕುಬಕಡ್ಡಿ ಮಾಡಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಕೊಠಡಿಯ ಒಳಗಡೆ ಏನೆಲ್ಲಾ ಆಗಿದೆ ಎಂಬ ಸಂಗತಿಯನ್ನು ಹೊರಗಡೆ ಕಿಟಕಿಯಿಂದ ನೋಡಬಹುದು. ಆದ್ರೆ ಅಷ್ಟು ಆತುರವಾಗಿ ಕೊಠಡಿಯ ಬಾಗಿಲನ್ನು ಮುರಿದು ಪೊಲೀಸರು ಬರುವ ಮುಂಚಿತವಾಗಿ ಕೋಣೆ ಪ್ರವೇಶ ಮಾಡಿದ್ದು ಯಾಕೆ? ಅದು ಕೂಡ ಕುಲಪತಿಗಳ ಅನುಪಸ್ಥಿತಿಯಲ್ಲಿ. ಹೀಗಾಗಿಯೇ ಈ ಆತ್ಮಹತ್ಯೆಯ ಕುರಿತಾಗಿ ವಿದ್ಯಾರ್ಥಿಗಳ ಡೀನ್ ಬಸವರಾಜ ಕುಬಕಡ್ಡಿ ಅವರ ಮೇಲೆ ಅನೇಕ ಅನುಮಾನ ಬರುತ್ತಿವೆ. ಹೀಗಾಗಿ ಪ್ರಾಧ್ಯಾಪಕರ ಮೇಲೆ ಕೂಡ ತನಿಖೆಯಾಗಬೇಕು. ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಈ ದಲಿತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು” ಒತ್ತಾಯಿಸಿದ್ದಾರೆ.