ಕಲಬುರಗಿ ಮಹಾನಗರ ಪಾಲಿಕೆಯ ಪಾಲಿಕೆ 23ನೇ ಅವಧಿಯ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವರ್ಷಾ ಜಾನೆ, ತೃಪ್ತಿ ಲಾಖೆ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ವರ್ಷಾ ಜಾನೆ ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ. ಕಾಂಗ್ರೆಸ್‌ನ ತೃಪ್ತಿ ಲಾಖೆ ಅವರಿಗೆ ಉಪ ಮೇಯರ್ ಸ್ಥಾನ ದೊರಕಿದೆ.
ನಗರದ ಇಂದಿರಾ ಗಾಂಧಿ ಸ್ಮಾರಕ ಭವನದಲ್ಲಿ ಗುರುವಾರ ಚುನಾವಣೆ ನಡೆಸಲಾಯಿತು. ಚುನಾವಣಾ ಅಧಿಕಾರಿ, ಕಲಬುರಗಿ ಪ್ರಾದೇಶಿಕ ಆಯುಕ್ತ ಜಹೀರಾ ನಸೀಮ್ ನೇತೃತ್ವದಲ್ಲಿ ಮೇಯರ್-ಉಪಮೇಯರ್ ಆಯ್ಕೆ ಮಾಡಲಾಯಿತು.
ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು, ವರ್ಷಾ ಜಾನೆ ಹಾಗೂ ಬಿಜೆಪಿಯ ಗಂಗಮ್ಮ ಮನ್ನೊಳಿ ಸ್ಪರ್ಧಿಗಳಾಗಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ನ ನಾಲ್ವರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ 36 ಮತಗಳೊಂದಿಗೆ ವರ್ಷಾ ಜಾನೆ ವಿಜೇತರಾಗಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಮಹಿಳೆಯ ಕೊಲೆ: ಮೃತದೇಹವನ್ನು ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದ ಕಿಡಿಗೇಡಿಗಳು
27 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಗಂಗಮ್ಮ ಸೋಲನ್ನು ಕಂಡಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ತೃಪ್ತಿ ಲಾಖೆ, ಜೆಡಿಎಸ್‌ನಿಂದ ವಿಜಯಲಕ್ಷ್ಮಿ ರೆಡ್ಡಿ ಹಾಗೂ ಬಿಜೆಪಿಯಿಂದ ಪಾರ್ವತಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ತೃಪ್ತಿ ಲಾಖೆ 33 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.