ಬಿಜೆಪಿ ಮತ್ತು ಜೆಡಿಎಸ್ ನಾಯಕರ ಕುತಂತ್ರದಿಂದ ಸಿದ್ದರಾಮಯ್ಯನವರ ತೇಜೋವಧೆ ನಡೆಯುತ್ತಿದೆ. ಮುಡಾ ಪ್ರಕರಣವನ್ನಿಟ್ಟುಕೊಂಡು ಷಡ್ಯಂತ್ರ ರೂಪಿಸಿ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಕುತಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸೂಚಕ ಸಮುದಾಯಗಳ ಮಹಾ ಒಕ್ಕೂಟದ ಕಲಬುರಗಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಧರಣಿ ನಿರತರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ರೂಪಿಸಿ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ. ಈ ಕುತಂತ್ರವನ್ನು ಖಂಡಿಸುತ್ತೇವೆ ಎಂದು ಧರಣಿ ನಿರತರು ತಿಳಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸೂಚಕ ಸಮುದಾಯಗಳ ಮಹಾ ಒಕ್ಕೂಟದ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಹಾಂತೇಶ್ ಎಸ್ ಕೌಲಗಿ, “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ 136 ಶಾಸಕರನೊಳಗೊಂಡಿರುವ ಸುಭದ್ರ ಸರ್ಕಾರವಾಗಿದೆ. ಈ ದೇಶದಲ್ಲಿ ಕರ್ನಾಟಕವನ್ನು ಅತ್ಯಂತ ಸುಭೀಕ್ಷೆಯಿಂದ ಕೂಡಿರುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಂತಹ ವಾತಾವರಣ ಹಾಳು ಮಾಡವ ಹುನ್ನಾರ ಮಾಡುತ್ತಿರುವುದು ಪ್ರಧಾನಮಂತ್ರಿ ಮೋದಿ, ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ. ಕೇಂದ್ರ ರಾಜ್ಯಪಾಲರನ್ನು ಕೈಗೊಂಬೆಯಾಗಿರಿಸಿಕೊಂಡು ರಾಜ್ಯ ಬಿಜೆಪಿ, ಜೆಡಿಎಸ್ ಷಡ್ಯಂತ್ರ ರೂಪಿಸುತ್ತಿದೆ. ಇದು ಖಂಡನೀಯ” ಎಂದರು.
“ಇದು ಕೇವಲ ಸಿದ್ದರಾಮಯ್ಯ ಅವರಿಗೆ ಮಾಡುವ ಅವಮಾನ ಅಲ್ಲ. ಇಡೀ ರಾಜ್ಯದ ಎಲ್ಲ ಬಡವರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮಾಡುತ್ತಿರುವ ಅವಮಾನ. ಈ ರಾಜ್ಯದಲ್ಲಿ ಹಿಂದುಳಿದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ಕೊಚ್ಚಿನಿಂದ ಈ ಕುತಂತ್ರ ಮಾಡುತ್ತಿದ್ದಾರೆ” ಎಂದು ಮಹಾಂತೇಶ್ ಎಸ್ ಕೌಲಗಿ ದೂರಿದರು.
ಈ ವೇಳೆ ಎಸ್ ಟಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷೆ ವಾಣಿಶ್ರೀ ಸಗರ್ಕರ್ ಮಾತನಾಡಿ, “ಎಲ್ಲ ವರ್ಗದವರು ಸ್ವ ಇಚ್ಛೆಯಿಂದ ಜಿಲ್ಲಾದ್ಯಂತ ಸಿದ್ದರಾಮಯ್ಯನವರಿಗೆ ಬೆಂಬಲ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿರುವುದು ಹೀನಾಯವಾದ ಕೆಲಸ” ಎಂದು ತಿಳಿಸಿದರು.

“ಹಿಂದುಳಿದವರ ಮಹಿಳೆ, ಯುವಕರ, ದೀನದಲಿತರು ಎಲ್ಲರ ಪರವಾಗಿ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಯುವನಿಧಿ, ಶಕ್ತಿ ಯೋಜನೆ, ಗೃಹಜ್ಯೋತಿ, ಭಾಗ್ಯ ಲಕ್ಷ್ಮೀ, ಅನ್ನ ಭಾಗ್ಯ ಪಂಚ ಯೋಜನೆಗಳು ಜಾರಿಮಾಡಿ ನುಡಿದಂತೆ ನಡೆದುಕೊಂಡಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌ನವರ ಕುತಂತ್ರ ಇಲ್ಲಿ ನಡೆಯುವುದಿಲ್ಲ. ಮೋದಿ, ಅಮಿತ್ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ರಾಜ್ಯಪಾಲ ರಾಜ್ಯ ಬಿಟ್ಟು ಮೊದಲು ತೊಲಗಬೇಕು. ಇಡೀ ರಾಜ್ಯದ ಮಹಿಳೆಯರ ಆಶೀರ್ವಾದ ಸಿದ್ದರಾಮಯ್ಯ ಅವರ ಜೊತೆಗೆ ಇದೆ” ಎಂದು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಬಸಯ್ಯ ಗುತ್ತೇದಾರ್, ಪವನ್ ಕುಮಾರ್ ವಳಕೇರಿ, ಕುಮಾರ್ ಯಾದವ್, ರೇವಣಸಿದ್ದಪ್ಪ ಸಾತ್ನೂರ್, ಮೆಹಬೂಬ್, ತಾಯ್ಬಣ್ಣ ಹೇಳವರ್, ಶರಣು ಸೂರ್ಯವಂಶಿ ಸೇರಿದಂತೆ ಹಲವಾರು ಮುಖಂಡರು ಧರಣಿ ಸತ್ಯಾಗ್ರಹದಲ್ಲಿದ್ದರು.
