ಪೌರಕಾರ್ಮಿಕರ ನೇರನೇಮಕಾತಿ ಮತ್ತು ಕಾಯಮಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿರುವುದನ್ನು ಕೂಡಲೇ ರದ್ದುಗೊಳಿಸಿ, ದಿನಗೂಲಿ ಪೌರಕಾರ್ಮಿಕರ ನೇರನೇಮಕಾತಿ, ಕಾಯಮಾತಿ ಆಯ್ಕೆಗೊಳಿಸಬೇಕೆಂದು ಒತ್ತಾಯಿಸಿ ಡಿಸೆಂಬರ್ 15 ರಂದು ಕಲಬುರಗಿ ಭೀಮ್ ಆರ್ಮಿ ಕರ್ನಾಟಕ, ಭಾರತ್ ಏಕತಾ ಮಿಷನ್ ಜಿಲ್ಲಾ ಸಮಿತಿಯಿಂದ ನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಸೂರ್ಯಕಾಂತ ನಿಂಬಾಳಕರ್ ತಿಳಿಸಿದರು.
ಕಲಬುರಗಿ ನಗರದಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರ ಕಾಯಮಾತಿಯಲ್ಲಿ ಪಾಲಿಕೆ ಮತ್ತು ಜಿಲ್ಲಾಡಳಿತದಲ್ಲಿನ ಅಧಿಕಾರಿಗಳಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಪಾಲಿಸದೇ ಪೌರಕಾರ್ಮಿಕರು ಅಲ್ಲದವರನ್ನು ಮತ್ತು ಮೃತಪಟ್ಟಿರುವರನ್ನು ಆಯ್ಕೆಗೊಳಿಸಿ ಸಕ್ರಮ ಪ್ರಾಧಿಕಾರ ನೇರನೇಮಕಾತಿ ಪೌರಕಾರ್ಮಿಕರ ನೇಮಕಾತಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಶಿಸ್ತುಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ದಿನಗೂಲಿ ಪೌರಕಾರ್ಮಿಕರನ್ನು ಆಯ್ಕೆಯಲ್ಲಿ ಪ್ರಥಮ ಆದ್ಯತೆ ನೀಡಲು ಮತ್ತು ಸೇಡಂ ತಾಲೂಕಿನ ಮಳಖೇಡ ಅಲ್ಟ್ರಾಟೆಕ್ ಸಿಮೆಂಟ್ ಲೋಡಿಂಗ್ ಮತ್ತು ಪ್ಯಾಕಿಂಗ್ ವಿಭಾಗದ ಕಾರ್ಮಿಕರ ಬೇಡಿಕೆಗಾಗಿ ಮನವಿ ಪತ್ರ ಸಲ್ಲಿಸಲ್ಲಿಸಿದರೂ ಕೂಡ ಈವರೆಗೆ ಯಾರೂ ಸ್ಪಂದಿಸಿರುವುದಿಲ್ಲ. ಇತರ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಭೀಮ್ ಆರ್ಮಿ ಜಿಲ್ಲಾ ಸಮಿತಿ ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಡಿಸೆಂಬರ್ 15 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಬೇಡಿಕೆ ಈಡೇರುವವರೆಗೆ ನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿಗೆ ಆಗ್ರಹಿಸಿ ಡಿ.17ರಂದು ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೂರ್ಯಕಾಂತ ಬೆಡಗಾ, ಸೂರ್ಯಕಾಂತ ನಿಂಬಾಳಕರ್, ಸೋಮಶೇಖರ್ ಬಂಗರಗಿ ಸೇರಿದಂತೆ ಇತರರು ಇದ್ದರು.